November 11, 2026
Wednesday, November 11, 2026
spot_img

ʼಸೊಸೆ ಕಲ್ಲುʼ ಹಾಸನಾಂಬೆ ದೇವಿಯನ್ನು ಸ್ಪರ್ಶಿಸಿದಾಗ ಕಲಿಯುಗದ ಅಂತ್ಯವಾಗಲಿದೆ! ಕಥೆ ಹೇಳೋದೇನು?

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹಾಸನಾಂಬ ದೇವಿಯ ದರುಶನೋತ್ಸವ ಇಂದು ಕೊನೆಯಾಗಲಿದೆ. ಕೊನೆಯ ದಿನವೂ ಭಕ್ತಾದಿಗಳು ಬೆಳಗ್ಗೆಯೇ ಆಗಮಿಸಿ ದೇವಿಯ ದರುಶನ ಪಡೆದು ಪುನೀತರಾಗುತ್ತಿದ್ದಾರೆ. ಹಾಸನಾಂಬ ದೇವಿಯ ದೇಗುಲದ ಸುತ್ತಮುತ್ತ ನೂರಾರು ಕಥೆಗಳಿವೆ. ರಾಜ್ಯದಲ್ಲಿರುವ ಇತರೆ ದೇವಾಲಯಗಳಿಂತ ಹಾಸನಾಂಬೆ ದೇಗುವ ವಿಭಿನ್ನವಾಗಲು ಈ ಐತಿಹಾಸಿಕ ಹಿನ್ನೆಲೆ, ನಂಬಿಕೆಗಳು ಕಾರಣವಾಗಿವೆ. ದೇವಸ್ಥಾನದ ಪ್ರಸಿದ್ಧ ವಿಷಯಗಳು, ನಂಬಿಕೆಗಳು, ಕಥೆಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ..

ಬಾಡದ ಹೂವು, ಆರದ ದೀಪ

ಈ ದೇಗುಲವನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಇಂದು ದೇವಸ್ಥಾನದ ಬಾಗಿಲು ಮುಚ್ಚಿದರೆ ಮುಂದಿನ ವರ್ಷವೇ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಒಂದು ವರ್ಷಗಟ್ಟಲೆ ದೇಗುಲವನ್ನು ಮುಚ್ಚಿದರೂ ದೇವಿಯ ಮೇಲಿರುವ ಹೂವುಗಳು ಬಾಡುವುದಿಲ್ಲ. ಹಚ್ಚಿದ ದೀಪ ಆರುವುದಿಲ್ಲ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿರುತ್ತಾರೆ.

ಹಾಸನಾಂಬ ದೇವಿ ಜಾತ್ರೆ ದೀಪಾವಳಿಯ ಮೊದಲು ಬಹಳ ಅದ್ಧೂರಿಯಾಗಿ ಜರುಗುತ್ತದೆ. ಈ ದೇವಿಯನ್ನು ಹಾಸನ ನಗರದ ಪ್ರಧಾನ ದೇವತೆಯಾಗಿ ಭಕ್ತರು ಪೂಜಿಸುತ್ತಾರೆ. ಮೂರು ಶಿಲೆಗಳ ರೂಪದಲ್ಲಿರುವ ಹಾಸನಾಂಬ ದೇವಿ ಇಲ್ಲಿ ನೆಲೆಸಿದ್ದಾಳೆ. ಈ ವರ್ಷ ಒಂಬತ್ತು ದಿನ ಮಾತ್ರ ಅಮ್ಮನ ದರುಶನಕ್ಕೆ ಅವಕಾಶವಿದೆ. ಆದರೆ ಹಬ್ಬ ಹರಿದಿನಗಳಲ್ಲಿ ಅಮ್ಮನವರ ದರುಶನ ಮಾಡಿದರೆ ಅವರ ಸಂಕಷ್ಟಗಳೆಲ್ಲವೂ ದೂರವಾಗುತ್ತವೆ. ಸುಖಿಯಾಗುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಆಶ್ವಯುಜ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರದಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಇಲ್ಲಿರುವ ದೇವಿಯ ಕಾರಣದಿಂದಲೇ ಜಿಲ್ಲೆಗೆ ‘ಹಾಸನ’ ಎಂಬ ಹೆಸರು ಬಂದಿದೆ ಎಂದು ಭಕ್ತರು ನಂಬುತ್ತಾರೆ.

ಸ್ಥಳಪುರಾಣ ಹೇಳುವುದೇನು?

ಅಂಧಕಾಸುರನು ಬ್ರಹ್ಮನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾನೆ. ಕಠಿಣ ತಪಸ್ಸಿನ ಬಳಿಕ ಬ್ರಹ್ಮನಿಂದ ಅಮರತ್ವದ ವರವನ್ನು ಪಡೆಯುತ್ತಾನೆ. ತನಗೆ ಸಾವೇ ಇಲ್ಲ ಎಂದು ಖಚಿತವಾದ ನಂತರ ಜನರಿಗೆ, ದೇವತೆಗಳಿಗೆ ಉಪದ್ರ ನೀಡಲು ಆರಂಭಿಸುತ್ತಾನೆ. ತದನಂತರ ಶಿವನು ಯೋಗೇಶ್ವರಿ ಎನ್ನುವ ಶಕ್ತಿಯನ್ನು ಸೃಷ್ಟಿಸುತ್ತಾನೆ. ಆ ಶಕ್ತಿಯು ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ಇಂದ್ರಾಣಿ ಹಾಗೂ ಚಾಮುಂಡಿಯ ರೂಪವನ್ನು ತಾಳಿ ಅಂಧಕಾಸುರನನ್ನು ಹತ್ಯೆ ಮಾಡುತ್ತದೆ. ತದನಂತರ ದೇವಿಯರು ಕಾಶಿಗೆ ಹೊರಟಿರುತ್ತಾರೆ. ಆದರೆ ಈ ಮಧ್ಯೆ ಹಾಸನಕ್ಕೆ ಬಂದಾಗ ಹಾಸನದ ಅಂದವನ್ನು ಮೆಚ್ಚುತ್ತಾರೆ. ಮಹೇಶ್ವರಿ, ವೈಷ್ಣವಿ ಹಾಗೂ ಕೌಮಾರಿ ದೇವಿಯರು ಹಾಸನದ ಬೆಟ್ಟದಲ್ಲಿ ನೆಲೆಸುತ್ತಾರೆ. ಉಳಿದ ದೇವತೆಗಳು ದೇವಗಿರಿ ಹೊಂಡ ಪ್ರದೇಶಕ್ಕೆ ತೆರಳುತ್ತಾರೆ ಎಂದು ಹೇಳಲಾಗಿದೆ. ಅಂದಿನಿಂದ ಈ ದೇವಾಲಯದಲ್ಲಿ ದೇವಿಯು ಭಕ್ತರಿಗೆ ಮೂರು ಕಲ್ಲುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ.

ಅತ್ತೆ ಕಲ್ಲಾದ ಕಥೆ

ಹಿಂದಿನ ಕಾಲದಲ್ಲಿ ಒಬ್ಬ ಅತ್ತೆಯು ಸೊಸೆಗೆ ಚಿತ್ರಹಿಂಸೆ ನೀಡುತ್ತಿರುತ್ತಾಳೆ. ಸೊಸೆ ಒಮ್ಮೆ ಹಾಸನಾಂಬೆ ದೇವಿಗೆ ಪೂಜಿಸುತ್ತಿರುವ ವೇಳೆ ಅತ್ತೆ ಅಲ್ಲಿಗೆ ಆಗಮಿಸುತ್ತಾಳೆ. ಕಲ್ಲಿನ ಮೂರ್ತಿಗಳ ಬಳಿ ಸೊಸೆ ನಿಂತಿದ್ದಾಗ ಆಕೆಯ ತಲೆಯನ್ನು ಮೂರ್ತಿಗಳಿಗೆ ತಳ್ಳುತ್ತಾಳೆ. ಅಂಬಾ ಎಂದು ಕೂಗುತ್ತಲೇ ಸೊಸೆ ಬೀಳುತ್ತಾಳೆ. ಆಕೆಯ ರಕ್ಷಣೆಗೆ ಬಂದ ದೇವಿ ಅತ್ತೆಯನ್ನು ಕ್ಷಣದಲ್ಲಿಯೇ ಕಲ್ಲಾಗಿ ಪರಿವರ್ತಿಸುತ್ತಾಳೆ. ಈ ಕಲ್ಲನ್ನು ಸೊಸೆ ಕಲ್ಲು ಎಂದು ಕರೆಯಲಾಗುತ್ತದೆ. ಪ್ರತೀ ವರ್ಷವೂ ಈ ಕಲ್ಲು ಅಕ್ಕಿ ಕಾಳಿನಷ್ಟು ದೇವಿಯ ಕಡೆಗೆ ಚಲಿಸುತ್ತದೆ ಎಂದು ನಂಬಲಾಗಿದೆ. ಪಶ್ಚಾತ್ತಾಪದಿಂದ ಸೊಸೆ ಕಲ್ಲು ದೇವಿಯ ಪಾದ ತಗುಲಿದ ಕ್ಷಣ ಕಲಿಯುಗದ ಅಂತ್ಯವಾಗುತ್ತದೆ ಎಂದು ನಂಬಲಾಗುತ್ತದೆ.

ಕನಸಿನಲ್ಲಿ ಬಂದ ದೇವಿ

ಎಲ್ಲ ದೇಗುಲಗಳಂತೆ ಹಾಸನಾಂಬೆಯ ದೇಗುಲವನ್ನು ವರ್ಷವಿಡೀ ಯಾಕೆ ತೆಗೆಯೋದಿಲ್ಲ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ. ಆದರೆ ಇದಕ್ಕೂ ಒಂದು ಕಥೆಯಿದೆ. ದೇವಿಯು ಭಕ್ತರೊಬ್ಬರ ಕನಸಿನಲ್ಲಿ ಆಗಮಿಸಿ, ನನಗೆ ನಿತ್ಯ ಪೂಜೆ ಬೇಡ. ವರ್ಷಕ್ಕೊಮ್ಮೆ ದೇಗುಲದ ಬಾಗಿಲು ತೆರೆದು ಪೂಜಿಸಿ ಎಂದು ಹೇಳಿದ್ದರು ಎನ್ನಲಾಗಿದೆ. ಈ ನಂಬಿಕೆಯನ್ನು ಈಗಲೂ ದೇವಿಯ ಆಜ್ಞೆ ಎಂದು ಪರಿಗಣಿಸಿ ವರ್ಷಕ್ಕೊಮ್ಮೆ ಮಾತ್ರ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ.

Must Read