ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವು ವಿದೇಶಿ ವಿಮಾನಗಳ ಸಂಚಾರವನ್ನು ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ವರ್ಗಾಯಿಸುವ ಪ್ರಸ್ತಾವಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಂದಿನ ಬೇಸಿಗೆ ವೇಳಾಪಟ್ಟಿಯಿಂದ ವಿಮಾನಗಳನ್ನು ಸ್ಥಳಾಂತರಿಸುವ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಮುಂಬೈ ಮತ್ತು ನವಿ ಮುಂಬೈ ವಿಮಾನ ನಿಲ್ದಾಣಗಳು ತಮ್ಮದೇ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಹೆಚ್ಚುತ್ತಿರುವ ವಿಮಾನಯಾನ ಬೇಡಿಕೆಯನ್ನು ಪೂರೈಸುವಲ್ಲಿ ಎರಡೂ ವಿಮಾನ ನಿಲ್ದಾಣಗಳು ಪ್ರಮುಖ ಪಾತ್ರ ವಹಿಸಲಿವೆ ಎಂಬುದು ಫಡ್ನವೀಸ್ ಅವರ ನಿಲುವಾಗಿದೆ.
ಟರ್ಮಿನಲ್ ಅಭಿವೃದ್ಧಿಗೆ ಪರ್ಯಾಯ ಯೋಜನೆ
ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-1 ಪುನರ್‌ನಿರ್ಮಾಣಕ್ಕೂ ಮುಖ್ಯಮಂತ್ರಿ ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಮೊದಲು ಟರ್ಮಿನಲ್ 1B ನಿರ್ಮಿಸಿ, ಬಳಿಕ 1Aಯಲ್ಲಿರುವ ವಿಮಾನಗಳ ಕಾರ್ಯಾಚರಣೆಯನ್ನು ಹೊಸ ವಿಭಾಗಕ್ಕೆ ವರ್ಗಾಯಿಸಬೇಕು. ನಂತರ ಹಳೆಯ 1A ಕಟ್ಟಡವನ್ನು ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ. ಇದರಿಂದ ನಿರ್ಮಾಣದ ಅವಧಿಯಲ್ಲೂ ವಿಮಾನ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ:
14 ವಿದೇಶಿ ಮಾರ್ಗಗಳ ಸ್ಥಳಾಂತರಕ್ಕೆ ಯೋಜನೆ
ಮುಂಬೈ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಯು ಬಹ್ರೇನ್, ದೋಹಾ, ಜಿದ್ದಾ, ಕಠ್ಮಂಡು, ಕುವೈತ್, ಮಸ್ಕತ್ ಮತ್ತು ರಿಯಾದ್ ಸೇರಿದಂತೆ 14 ಅಂತಾರಾಷ್ಟ್ರೀಯ ತಾಣಗಳಿಗೆ ತೆರಳುವ ವಿಮಾನಗಳನ್ನು ನವಿ ಮುಂಬೈಗೆ ವರ್ಗಾಯಿಸಲು ಯೋಜಿಸಿತ್ತು. ವಿದೇಶಿ ವಿಮಾನಯಾನ ಸಂಸ್ಥೆಗಳ ಆಕ್ಷೇಪದ ಹಿನ್ನೆಲೆಯಲ್ಲಿ ಅಕ್ಟೋಬರ್ 25ರಿಂದ ಜಾರಿಗೆ ಬರಬೇಕಿದ್ದ ಯೋಜನೆಯನ್ನು ಮುಂದೂಡಿ, 2027ರ ಮಾರ್ಚ್‌ಗೆ ನಿಗದಿಪಡಿಸಲಾಗಿತ್ತು.
ಇದೇ ವೇಳೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಮತ್ತು ಆಕಾಶ ಏರ್ ಸಂಸ್ಥೆಗಳು ಹಂತ ಹಂತವಾಗಿ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ತಮ್ಮ ಅಂತಾರಾಷ್ಟ್ರೀಯ ಕಾರ್ಯಾಚರಣೆ ಸ್ಥಳಾಂತರಿಸುವುದಾಗಿ ತಿಳಿಸಿವೆ.
ಸದ್ಯ ಮುಂಬೈ ವಿಮಾನ ನಿಲ್ದಾಣ ವರ್ಷಕ್ಕೆ ಸುಮಾರು 5.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಟರ್ಮಿನಲ್‌ಗಳ ಅಭಿವೃದ್ಧಿ ಪೂರ್ಣಗೊಂಡ ಬಳಿಕ ಈ ಸಾಮರ್ಥ್ಯ 6.5 ಕೋಟಿಗೆ ಏರಲಿದೆ. ಹೀಗಾಗಿ ವಿಮಾನಗಳ ಸ್ಥಳಾಂತರದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದ ನಿಲುವುಗಳು ಯಾವ ತಿರುವು ಪಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.



