ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಆಗಮಿಸುವ ಮಾರ್ಗಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪ್ರಧಾನಿ ಮೋದಿ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..
ಬೆಳಗ್ಗೆ 10:05ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, 10:45ಕ್ಕೆ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕೆಲಕಾಲ ವಿಶ್ರಾಂತಿ ಪಡೆದು ತದನಂತರ 12:40ಕ್ಕೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಬಹುನಿರೀಕ್ಷಿತ ಪಿಂಕ್ ಮೆಟ್ರೋ ಲೈನ್ ಉದ್ಘಾಟನೆ ಮಾಡಲಿದ್ದಾರೆ. ತದನಂತರ 1:15ಕ್ಕೆ ಐಐಎಂಬಿ ಆಡಿಟೋರಿಯಂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಎರಡು ಗಂಟೆಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ತದನಂತರ ಹೆಲಿಕಾಪ್ಟರ್ನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇರುವ ತಾರಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಆರು ಗಂಟೆ ಸುಮಾರಿಗೆ ಪ್ರಧಾನಿ ಮೈಸೂರಿನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ಸಂಚಾರ ಪೊಲೀಸರು ನಗರದ ಹಲವೆಡೆ ತಾತ್ಕಾಲಿಕ ಸಂಚಾರ ಮಾರ್ಪಾಡು ಮಾಡಿದ್ದಾರೆ. ಅತಿಗಣ್ಯರು ಸಂಚರಿಸುವ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಗಳ ಬಳಿ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ಎಲ್ಲ ವಾಹನಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್ಪಾಸ್ ಬಳಿ, ಕಾರ್ಯಕ್ರಮ ನಡೆಯುವ ವೇಳೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
https://twitter.com/blrcitytraffic/status/2120535792045228034/photo/2
ಮಾರೇನಹಳ್ಳಿ ಮುಖ್ಯ ರಸ್ತೆಯ 28ನೇ ಮುಖ್ಯ ರಸ್ತೆ ಕಡೆಯಿಂದ ಜಯದೇವ ಹಾಸ್ಪಿಟಲ್ ಜಂಕ್ಷನ್ ಕಡೆಗೆ ಸಂಚಾರವನ್ನು, ವಿವಿಐಪಿಗಳ ಸಂಚಾರದ ಸಮಯದಲ್ಲಿ ದೈನಂದಿನ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಈಸ್ಟ್ ಎಂಡ್ ಮುಖ್ಯ ರಸ್ತೆಯ ಈಸ್ಟ್ ಎಂಡ್ ಜಂಕ್ಷನ್ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು, ಅತಿಗಣ್ಯರು ಸಂಚರಿಸುವ ವೇಳೆ ನಿರ್ಬಂಧಿಸಲಾಗಿದೆ.



