November 12, 2026
Thursday, November 12, 2026
spot_img

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಪೊಲೀಸ್‌ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಭದ್ರತಾ ಪಡೆಗಳು ಅವರಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದು, ಸದ್ಯ ಜಮ್ಮು ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಿಶ್ತ್ವಾರ್‌ ಜಿಲ್ಲೆಯಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಗಳಾದ 57 ವರ್ಷದ ಬಾಬಿ ಚಂದ್ ಮತ್ತು 45 ವರ್ಷದ ರಶ್‌ಪಾಲ್ ಕುಮಾರ್ ನಾಪತ್ತೆಯಾಗಿದ್ದಾರೆ. ಇವರು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಿಯಾರ್‌ ಶಿಬಿರದಿಂದ ಧರ್ನಾ ಮರ್ವಾ ಪ್ರದೇಶದಲ್ಲಿರುವ ಸೇನಾ ಶಿಬಿರಕ್ಕೆ ತೆರಳುವ ಮಾರ್ಗಮಧ್ಯೆ ನಾಪತ್ತೆಯಾಗಿದ್ದಾರೆ.

ಅವರ ಫೋನ್‌ಗಳು ಮೊದಲ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದು, ಮರುಕ್ಷಣವೇ ಸ್ವಿಚ್‌ ಆಫ್‌ ಆಗಿದೆ. ಸ್ಥಳೀಯರಿಗೆ ಗುಂಡಿನ ಸದ್ದು ಕೇಳಿಸಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಇದರಲ್ಲಿ ಉಗ್ರರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ. ಅಧಿಕಾರಿಗಳ ಪತ್ತೆಗಾಗಿ ಪೊಲೀಸರು, ಸೇನೆಯ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡಗಾಡು ಪ್ರದೇಶಗಳು ಹಾಗೂ ದಟ್ಟ ಅರಣ್ಯಗಳಲ್ಲಿ ತೀವ್ರ ಶೋಧ ಮುಂದುವರಿದಿದೆ.

ಈ ಪರಿಸ್ಥಿತಿ ನಡುವಲ್ಲಿಯೇ ಕುಲ್ಗಾಮ್‌ ಜಿಲ್ಲೆಯ ಸಿಆರ್‌ಪಿಎಫ್‌ ಚೆಕ್‌ಪೋಸ್ಟ್‌ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮೂವರ ಪೈಕಿ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಯೋಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ 92 ಬೇಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

Must Read