ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರ ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಸಾಕಷ್ಟು ಬುಲೆಟ್‌ಗಳು ಸಿಲುಕಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷ ಪೊಲೀಸ್ ಅಧಿಕಾರಿಗಳ ಬಳಿ ಇದ್ದ ಸೇವಾ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ. ಇದರಲ್ಲಿ ಉಗ್ರರ ಕೈವಾಡವಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನ ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ಬಾಬಿ ಚಂದ್ (57) ಮತ್ತು ರಾಶ್ಪಾಲ್ ಕುಮಾರ್ (45) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಕಿಶ್ತ್ವಾರ್ ಪೊಲೀಸರ ‘ಸ್ಪೆಷಲ್ ಆಪರೇಷನ್ಸ್ ಗ್ರೂಪ್’ ಗೆ ಸೇರಿದವರಾಗಿದ್ದು, ಕಿಯಾರ್ ವಲಯದಲ್ಲಿ ನಿಯೋಜನೆಗೊಂಡಿದ್ದರು. ಅಧಿಕಾರಿಗಳ ಪ್ರಕಾರ, ಚಂದ್ ಮತ್ತು ಕುಮಾರ್ ಅವರಿಗೆ ಮಾರ್ವಾಹ್‌ನ ಧರ್ನಾ ವಲಯದಲ್ಲಿರುವ 17ನೇ ರಾಷ್ಟ್ರೀಯ ರೈಫಲ್ಸ್ ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಗೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಬುಧವಾರ ಅವರು ಕಿಯಾರ್‌ನಲ್ಲಿರುವ ತಮ್ಮ ಶಿಬಿರದಿಂದ ಸೇನಾ ನೆಲೆಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದರು, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇಬ್ಬರು ಅಧಿಕಾರಿಗಳು ನಾಪತ್ತೆಯಾದ ಬೆನ್ನಲ್ಲೇ ಸೇನಾ ಪಡೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.
ತಕ್ಷಣ ಕರೆ ಮಾಡಿದಾಗ ಇಬ್ಬರ ಫೋನ್‌ಗಳು ರಿಂಗ್ ಆಗಿದೆ. ಆದರೆ ಕ್ಷಣದಲ್ಲಿಯೇ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ಥಳೀಯರು ಗುಂಡಿನ ಸದ್ದುಗಳನ್ನು ಕೇಳಿದ್ದೆವು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.ಈ ಘಟನೆಯಲ್ಲಿ ಉಗ್ರರ ಕೈವಾಡವಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



