November 12, 2026
Thursday, November 12, 2026
spot_img

ದೀಪಾವಳಿ ಸಂಭ್ರಮದ ನಂತರ ಕೆ.ಆರ್.ಮಾರುಕಟ್ಟೆ ಫುಲ್ ಕ್ಲೀನ್: ನಾಲ್ಕೇ ದಿನದಲ್ಲಿ 150 ಟನ್ ತ್ಯಾಜ್ಯ ತೆರವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮುಗಿಯುತ್ತಿದ್ದಂತೆ, ಬೆಂಗಳೂರಿನ ಹೃದಯಭಾಗದಲ್ಲಿರುವ ಕೃಷ್ಣರಾಜೇಂದ್ರ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಸ್ವಚ್ಛತೆಯ ಹೊಸ ರೂಪ ನೀಡಿದೆ. ಹಬ್ಬದ ವೇಳೆ ಮಾರುಕಟ್ಟೆಯಲ್ಲಿ ರಾಶಿ ಬಿದ್ದಿದ್ದ ಬರೋಬ್ಬರಿ 150 ಟನ್ ತ್ಯಾಜ್ಯವನ್ನು ಕೇವಲ ನಾಲ್ಕೇ ದಿನಗಳಲ್ಲಿ ತೆರವುಗೊಳಿಸುವ ಮೂಲಕ ಪಾಲಿಕೆ ಭರ್ಜರಿ ಕಾರ್ಯಾಚರಣೆ ನಡೆಸಿದೆ.

ದೀಪಾವಳಿ ಖರೀದಿಯ ಭರಾಟೆಯಿಂದಾಗಿ ಮಾರುಕಟ್ಟೆಯ ಮೂಲೆಮೂಲೆಯಲ್ಲೂ ಹೂವು, ಹಣ್ಣು, ತರಕಾರಿ ತ್ಯಾಜ್ಯ, ಬಾಳೆಕಂದು, ಮಾವಿನ ತೋರಣ ಹಾಗೂ ಪ್ಲಾಸ್ಟಿಕ್ ಕಸದ ರಾಶಿಯೇ ಬಿದ್ದಿತ್ತು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಮತ್ತು ವ್ಯಾಪಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ, ಸ್ವಚ್ಛತಾ ಕಾರ್ಯ ಕೈಗೊಂಡು ಇಡೀ ಮಾರುಕಟ್ಟೆಯನ್ನು ತ್ಯಾಜ್ಯಮುಕ್ತಗೊಳಿಸಿದೆ.

ಯಾವ ದಿನ ಎಷ್ಟು ಕಸ ತೆರವು?

ಈ ವಿಶೇಷ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ವೆಂಕಟಾಚಲಪತಿ ಆರ್. ಅವರು, ನಾಲ್ಕು ದಿನಗಳ ತ್ಯಾಜ್ಯ ವಿಲೇವಾರಿಯ ವಿವರ ನೀಡಿದ್ದಾರೆ:

ಮೊದಲ ದಿನ (ನ. 8): 30 ಟನ್

ಎರಡನೇ ದಿನ (ನ. 9): 35 ಟನ್

ಮೂರನೇ ದಿನ (ನ. 10): 45 ಟನ್

ನಾಲ್ಕನೇ ದಿನ (ನ. 11): 40 ಟನ್

ಈ ಬೃಹತ್ ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರು, ಮಾರ್ಷಲ್‌ಗಳು, ಆರೋಗ್ಯ ನಿರೀಕ್ಷಕರು ಮತ್ತು ಮೇಲ್ವಿಚಾರಣಾ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲೂ ಮಾರುಕಟ್ಟೆಯ ಸ್ವಚ್ಛತೆಯ ಮೇಲೆ ನಿರಂತರ ನಿಗಾ ಇಡಲಾಗುವುದು ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಜೊತೆಗೆ, ಮಾರುಕಟ್ಟೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಲು ವ್ಯಾಪಾರಿಗಳು ಮತ್ತು ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ, ನಿಗದಿತ ಸ್ಥಳಗಳಲ್ಲಿಯೇ ತ್ಯಾಜ್ಯವನ್ನು ಹಾಕುವ ಮೂಲಕ ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಲಾಗಿದೆ.

Must Read

Skip to toolbar