November 13, 2026
Friday, November 13, 2026
spot_img

ಬೆಂಗಳೂರು-ಮಡಗಾಂವ್ ವಂದೇ ಭಾರತ್​​ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು-ಮಡಗಾಂವ್ ವಂದೇ ಭಾರತ್​​ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ವೇಗದ ಹಾಗೂ ಆಧುನಿಕ ರೈಲು ಸಂಪರ್ಕ ಕಲ್ಪಿಸಲಿರುವ ವಂದೇ ಭಾರತ್‌ ರೈಲಿಗೆ ಪ್ರಧಾನಿ ಮೋದಿ ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಿಂದ ವರ್ಚ್ಯುಯಲ್‌ ಮೂಲಕ ಚಾಲನೆ ನೀಡಿದ್ದಾರೆ.

ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಿ ಅಂತಿಮವಾಗಿ ಗೋವಾದ ಮಡಗಾಂವ್ ತಲುಪಲಿದೆ. ಸುಮಾರು 670 ಕಿಲೋ ಮೀಟರ್ ಮಾರ್ಗದಲ್ಲಿ ಈ ರೈಲು ಕ್ರಮಿಸಲಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಪಡಿಸಿರುವ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ಇದೇ ವೇಳೆ ಉದ್ಘಾಟಿಸಿದ್ದಾರೆ.

284 ಕಿಲೋಮೀಟರ್ ಉದ್ದದ ಗದಗ-ಹೊಟಗಿ ರೈಲು ಮಾರ್ಗ ದ್ವಿಗುಣೀಕರಣ ಯೋಜನೆಯ ಭಾಗವಾಗಿರುವ 45 ಕಿಲೋಮೀಟರ್ ಉದ್ದದ ಬಾಗಲಕೋಟೆ-ವಂಡಾಲ್ ರೈಲು ಮಾರ್ಗದ ದ್ವಿಗುಣೀಕರಣ ಕಾಮಗಾರಿಯನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ಯೋಜನೆಯಿಂದ ಪ್ರಯಾಣಿಕರು ಮತ್ತು ಸರಕು ಸಾಗಣೆ ರೈಲುಗಳ ಸಂಚಾರ ಸುಧಾರಿಸಲಿದೆ. ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ದೊರೆಯುವುದರ ಜೊತೆಗೆ ಕೂಡ್ಗಿ ಎನ್‌ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆ ಸುಗಮವಾಗಲಿದೆ.

55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನೂ ಪ್ರಧಾನಿ ಇದೇ ವೇಳೆ ಲೋಕಾರ್ಪಣೆ ಮಾಡಿದ್ದು, ಈ ಕಾಮಗಾರಿ ಪೂರ್ಣಗೊಂಡಿರುವುದರಿಂದ ಬೆಂಗಳೂರು-ಮಂಗಳೂರು ಸಂಪೂರ್ಣ ರೈಲು ಮಾರ್ಗವು ಈಗ ವಿದ್ಯುದ್ದೀಕರಣಗೊಂಡಂತಾಗಿದೆ.

Must Read