ಹೊಸದಿಗಂತ ವರದಿ ಚಿತ್ರದುರ್ಗ;
ಬಿಸಿಯೂಟ ತಯಾರಿಕೆಯನ್ನು ಎನ್ಜಿಒಗಳಿಗೆ ವಹಿಸುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಂದಿರುವ ಬಿಸಿಯೂಟ ತಯಾರಕರನ್ನು ಬಿಟ್ಟು ಖಾಸಗಿ ಸಂಸ್ಥೆಗಳಿಗೆ ಈ ಯೋಜನೆ ವಹಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಬದಲಾಗಿ ಖಾಸಗಿ ಸಂಘ ಸಂಸ್ಥೆಗಳು, ಎನ್ಜಿಒಗಳಿಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ಲಸ್ಟರ್ ಮಟ್ಟದ ಕಿಚನ್ ಸೆಂಟರ್ ಕೇಂದ್ರೀಕೃತ ಅಡುಗೆ ಮನೆಗಳ ಮೂಲಕ ಬಿಸಿಯೂಟ ಅಡಯಗೆ ತಯಾರಿಸಿ ಶಾಲೆಗಳಿಗೆ ಪೂರೈಸಬೇಕೆಂದು ಶಿಕ್ಷಕರ ಸಂಘದವರು ಮನವಿ ಕೊಟ್ಟಿದ್ದಾರೆ. ಅದರಂತೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ರಾಜ್ಯ ನಿರ್ದೇಶಕರ ಕಚೇರಿಯಿಂದ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರುಗಳಿಗೆ ಪತ್ರ ಬರೆಯಲಾಗಿದೆ. ಇದರ ಸಾಧಕ ಬಾಧಕಗಳ ಕುರಿತು ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತು ಅಭಿಪ್ರಾಯ ತಿಳಿಸುವಂತೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ರಾಜ್ಯ ನಿರ್ದೇಶಕರ ಕಚೇರಿಯಿಂದ ವಿಷಯ ಸಂಗ್ರಹಿಸುವಂತೆ ಜಂಟಿ ನಿರ್ದೇಶಕರು ಕೋರಿದ್ದಾರೆ ಎಂದು ಅಲವತ್ತುಕೊಂಡರು.
ಇದನ್ನೂ ಓದಿ:
ಶಿಕ್ಷಕರು ಶಾಲೆಗಳಲ್ಲಿ ನಡೆಯುವ ಬಿಸಿಯೂಟ ಕಾರ್ಯಕ್ರಮವನ್ನು ಗಮನಿಸುವುದರಿಂದ ಅವರ ಕೆಲಸಗಳಿಗೆ ಹಿನ್ನಡೆಯಾಗುತ್ತದೆ ಎನ್ನಲಾಗಿದೆ. ಆದರೆ ಪ್ರತಿ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಒಬ್ಬ ಮುಖ್ಯ ಅಡುಗೆ ತಯಾರಕು ಇರುತ್ತಾರೆ. ಹಾಗಾಗಿ ಬಿಸಿಯೂಟ ತಯಾರಿಕೆಯ ಜವಾಬ್ಧಾರಿಯನ್ನು ಮುಖ್ಯ ಅಡುಗೆಯವರೇ ನೋಡಿಕೊಳ್ಳುತ್ತಾರೆ. ಹಾಗಾಗಿ ಶಿಕ್ಷಕರು ಅಡುಗೆ ತಯಾರಿಕೆ ಉಸಾಬರಿ ಮರೆತು ತಮ್ಮ ಕೆಲಸಗಳನ್ನು ಮಾಡಿಕೊಂಡರೆ ಸಾಕು ಎಂದು ಪ್ರತಿಭಟನಾಕಾರರು ಹೇಳಿದರು.
ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ಸುಮಾರು ೧,೧೩,೦೦೦ ಜನ ಅಡುಗೆ ತಯಾರಿಕ ಕಾರ್ಯಕರ್ತರು ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇದು ಇಷ್ಟು ಜನರ ಕೆಲಸದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇದರಿಂದಾಗಿ ಈ ಯೋಜನೆಯನ್ನು ಮೊದಲಿನಂತೆ ಶಾಲೆಗಳಲ್ಲೇ ಮುಂದುವರಿಸಬೇಕು. ಶಿಕ್ಷಕರ ಸಂಘದವರು ನೀಡಿರುವ ಮನವಿಯನ್ನೇ ನೆಪ ಮಾಡಿಕೊಂಡು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಬಿಸಿಯೂಟ ತಯಾರಿಕೆ ಹೊಣೆ ಖಾಸಗಿ ಸಂಸ್ಥೆಗಳಿಗೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ರಾಜ್ಯಸ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ನಿರಾತಂಕವಾಗಿ ನಡೆಯುತ್ತಿದೆ. ಇದರಿಂದ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಶಿಕ್ಷಣ ಸಚಿವರು ಬಿಸಿಯೂಟ ತಯಾರಿಕೆ ಯೋಜನೆ ಸಂಘ ಸಂಸ್ಥೆಗಳಿಗೆ ವಹಿಸುವ ಕ್ರಮವನ್ನು ಕೈಬಿಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.



