November 13, 2026
Friday, November 13, 2026
spot_img

ಅಸ್ಸಾಂನ ಕಾಜಿರಂಗ ಬಳಿ ಮಿನಿ ಬಸ್-ಟ್ರೈಲರ್ ಟ್ರಕ್ ಮುಖಾಮುಖಿ ಡಿಕ್ಕಿ; 23 ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಸ್ಸಾಂನ ಕಾಜಿರಂಗದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 23 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಬೊಕಖಾಟ್‌ನಿಂದ ನಾಗಾಂವ್ ಕಡೆಗೆ ತೆರಳುತ್ತಿದ್ದ ಮಿನಿ ಬಸ್ ಮತ್ತು ಎದುರಿನಿಂದ ಬಂದ ಟ್ರೈಲರ್ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಈ ಘೋರ ದುರಂತ ನಡೆದಿದೆ.

ಡಿಕ್ಕಿಯ ರಭಸಕ್ಕೆ ಪ್ರಯಾಣಿಕರಿದ್ದ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಹಲವರು ವಾಹನದೊಳಗೆ ಸಿಲುಕಿಕೊಂಡಿದ್ದರು. ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಮೊದಲು ಕೊಹೊರಾ ಮಾಡೆಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಗೋಲಾಘಾಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಸ್ವಪ್ನನೀಲ್ ದೇಕಾ ಅವರು 23 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. “ಪ್ರಾಥಮಿಕ ವರದಿಯ ಪ್ರಕಾರ 23 ಮಂದಿ ಸಾವನ್ನಪ್ಪಿದ್ದಾರೆ. ನಾವೆಲ್ಲರೂ ಸ್ಥಳದಲ್ಲೇ ಇದ್ದು, ಬಸ್‌ನಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ” ಎಂದು ಅವರು ತಿಳಿಸಿದ್ದಾರೆ. ಬಸ್‌ನಲ್ಲಿ ನಿಖರವಾಗಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ.

ಅತಿವೇಗವೇ ದುರಂತಕ್ಕೆ ಕಾರಣವಾಯಿತೇ?

ರಾಷ್ಟ್ರೀಯ ಉದ್ಯಾನವನದ ಸಮೀಪ ವಿಧಿಸಲಾದ ವೇಗದ ಮಿತಿಯನ್ನು ಉಲ್ಲಂಘಿಸಿ ಮಿನಿ ಬಸ್ ಅತಿವೇಗವಾಗಿ ಚಲಿಸುತ್ತಿತ್ತು ಎಂದು ಎಸ್‌ಎಸ್‌ಪಿ ದೇಕಾ ಮಾಹಿತಿ ನೀಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದೇ ವೇಳೆ, ಅಪಘಾತಕ್ಕೀಡಾದ ‘ಟ್ರಾವೆಲರ್’ ಮಿನಿ ಬಸ್‌ನ ಹಳೆಯ ಟ್ರಾಫಿಕ್ ಉಲ್ಲಂಘನೆಗಳ ಮಾಹಿತಿಯೂ ಬಯಲಾಗಿದೆ. ಈ ವಾಹನದ ಮೇಲೆ ಈ ಹಿಂದೆ 12 ಚಲನ್‌ಗಳಿದ್ದು, 38,500 ರೂ.ದಂಡ ಪಾವತಿಸಲಾಗಿತ್ತು. ಅಲ್ಲದೆ, ಅತಿವೇಗದ ಚಾಲನೆಗಾಗಿ ವಿಧಿಸಲಾದ 4,000 ರೂ.ದಂಡ ಇನ್ನೂ ಬಾಕಿ ಇತ್ತು ಎಂಬುದು ತಿಳಿದುಬಂದಿದೆ.

ಸಿಎಂ ಹಿಮಂತ ಬಿಸ್ವಾ ಶರ್ಮಾ ಸಂತಾಪ

ಸ್ಥಳೀಯ ಶಾಸಕರೂ ಆಗಿರುವ ಅಸ್ಸಾಂ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಅತುಲ್ ಬೋರಾ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ.

ಘಟನೆ ಕುರಿತು ‘ಎಕ್ಸ್’ ಮೂಲಕ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಈ ಜೀವಹಾನಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮೃತರ ಕುಟುಂಬಗಳ ದುಃಖದಲ್ಲಿ ಇಡೀ ಅಸ್ಸಾಂ ಭಾಗಿಯಾಗಿದೆ. ಗಾಯಾಳುಗಳಿಗೆ ಯಾವುದೇ ವಿಳಂಬವಿಲ್ಲದೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದ್ದಾರೆ.

Must Read