November 14, 2026
Saturday, November 14, 2026
spot_img

ಶಾಲೆಯಿಂದ ಬಂದ ಮಗುವಿಗೆ ಎಷ್ಟು ಮಾರ್ಕ್ಸ್? ಎನ್ನುವ ಬದಲು ಈ ಪ್ರಶ್ನೆಗಳನ್ನು ಕೇಳಿ ನೋಡಿ

ಶಾಲೆ ಮುಗಿಸಿ ಮನೆಗೆ ಬಂದ ಮಗುವನ್ನು ನಾವು ಮೊದಲು ಕೇಳುವ ಪ್ರಶ್ನೆ ಯಾವುದು? ಎಷ್ಟು ಮಾರ್ಕ್ಸ್ ಬಂತು?, ಟೀಚರ್ ಪಾಠ ಮಾಡಿದ್ರು ಅಲ್ವಾ, ಹೋಮ್‌ವರ್ಕ್ ಆಯ್ತಾ?… ಹೌದು, ಇದು ಪ್ರತಿಯೊಂದು ಮನೆಯಲ್ಲೂ ದಿನವೂ ಕಂಡುಬರುವ ಸಾಮಾನ್ಯ ದೃಶ್ಯ. ಆದರೆ ಸ್ವಲ್ಪ ಯೋಚಿಸಿ, ಈ ಪ್ರಶ್ನೆಗಳು ಮಗುವಿನ ಮನಸ್ಸಿನ ಮೇಲೆ ಎಂಥಾ ಒತ್ತಡವನ್ನು ಉಂಟುಮಾಡುತ್ತಿರಬಹುದು?

ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳಂತೆ ಕಾಣುವ ಬದಲು, ಅವರೊಂದಿಗೆ ಪ್ರೀತಿಯಿಂದ ಬೆರೆಯುವ ಸಣ್ಣ ಬದಲಾವಣೆ ಇಂದಿನ ಕಾಲದ ತುರ್ತು ಅಗತ್ಯವಾಗಿದೆ.

ನಮ್ಮ ಶಿಕ್ಷಣ ಪದ್ಧತಿ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಗೆ ಸಿಕ್ಕಿರುವ ಮಹತ್ವ ದೊಡ್ಡದೇ ಸರಿ. ಆದರೆ ಅದರಿಂದ ಮಕ್ಕಳ ಸಹಜ ಬಾಲ್ಯವೇ ಕಣ್ಮರೆಯಾಗುತ್ತಿದೆ. ಶಾಲೆ ಎಂದರೆ ಕೇವಲ ಪರೀಕ್ಷೆ, ಶ್ರೇಣಿ ಮತ್ತು ಫಲಿತಾಂಶಗಳಲ್ಲ. ಅದು ನಗು, ಆಟ, ಗೆಳೆತನ ಮತ್ತು ಹೊಸ ಅನುಭವಗಳ ಸುಂದರ ಲೋಕ. ಮಗು ಶಾಲೆಗೆ ಹೋಗುವುದು ಕೇವಲ ಅಂಕ ಸಂಪಾದನೆಗಾಗಿ ಅಲ್ಲ, ಜೀವನ ಪಾಠ ಕಲಿಯಲು. ಹೀಗಾಗಿ, ಪ್ರತಿದಿನ ಸಂಜೆ ಶಾಲೆಯಿಂದ ಮರಳಿ ಬಂದ ಮಗುವಿಗೆ ಅಂಕಗಳ ಬೆತ್ತ ಹಿಡಿದು ಸ್ವಾಗತಿಸುವುದು ಸರಿಯಲ್ಲ.

ಬದಲಾಗಬೇಕು ನಿಮ್ಮ ಪ್ರಶ್ನೆಗಳ ಧಾಟಿ

ಮಗು ಮನೆಗೆ ಬಂದ ಕೂಡಲೇ ಅಂಕ, ಪಾಠ, ಓದುವುದರ ಬಗ್ಗೆ ವಿಚಾರಿಸುವ ಬದಲು, ಅವರ ಮನಸ್ಸಿಗೆ ಹತ್ತಿರವಾಗುವ ಕೆಲವು ಸರಳ ಪ್ರಶ್ನೆಗಳನ್ನು ಕೇಳಿ ನೋಡಿ.

ಇವತ್ತು ನಿನ್ನ ಮುಖದಲ್ಲಿ ನಗು ತಂದ ಸಂಗತಿ ಯಾವುದು?

ಸ್ನೇಹಿತರ ಜೊತೆ ನಿನ್ನ ಲಂಚ್ ಬಾಕ್ಸ್ ಹಂಚಿಕೊಂಡ?

ಇವತ್ತು ಕ್ಲಾಸ್ ಅಲ್ಲಿ ಯಾರಿಗಾದರೂ ಸಹಾಯ ಮಾಡಿದ್ಯಾ?

ಸ್ನೇಹಿತರೊಂದಿಗೆ ಹೇಗೆ ಕಾಲ ಕಳೆದೆ?

ಇವತ್ತು ಹೊಸದಾಗಿ ಏನು ಕಲಿತುಕೊಂಡೆ?

ಈ ರೀತಿಯ ಪ್ರಶ್ನೆಗಳು ಮಗುವಿನಲ್ಲಿ ಉತ್ಸಾಹವನ್ನು ತುಂಬುತ್ತವೆ. ಮುಖದಲ್ಲಿ ಒಂದು ಮಂದಹಾಸ ಮೂಡುತ್ತದೆ. ಅಮ್ಮ/ಅಪ್ಪ ನನ್ನನ್ನು ಅಂಕಗಳಿಗಾಗಿ ಅಲ್ಲ, ನನ್ನ ಖುಷಿಗಾಗಿ ಪ್ರೀತಿಸುತ್ತಾರೆ ಎಂಬ ಭರವಸೆ ಮಗುವಿನಲ್ಲಿ ಬೆಳೆಯುತ್ತದೆ.

ಬಾಂಧವ್ಯ ಬೆಸೆಯುವ ಕ್ಷಣ

ಮಕ್ಕಳು ತಮ್ಮ ದಿನದ ಸಣ್ಣಪುಟ್ಟ ತಮಾಷೆಯ ಸಂಗತಿಗಳನ್ನು, ಸ್ನೇಹಿತರೊಂದಿಗೆ ಆಡಿದಾಟಗಳನ್ನು ಹಂಚಿಕೊಂಡಾಗ ಪೋಷಕರಾಗಿ ನಿಮಗೂ ಅವರ ಜಗತ್ತು ಹತ್ತಿರವಾಗುತ್ತದೆ. ಯಾರೋ ಬಿದ್ದು ನಕ್ಕಿದ್ದಿರಬಹುದು, ಅಥವಾ ಊಟ ಹಂಚಿಕೊಂಡಿದ್ದಿರಬಹುದು ಇಂತಹ ಸಣ್ಣಪುಟ್ಟ ವಿಷಯಗಳು ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ಬಹಳ ಮುಖ್ಯ.

ಅದೇ ರೀತಿ, ಇವತ್ತು ಯಾರಿಗಾದರೂ ಸಹಾಯ ಮಾಡಿದ್ಯಾ? ಎಂಬ ಪ್ರಶ್ನೆ ಮಕ್ಕಳಲ್ಲಿ ಸಹಾನುಭೂತಿ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸುತ್ತದೆ. ಇದು ಪುಸ್ತಕದಿಂದ ಬರುವ ಅಂಕಗಳಿಗಿಂತಲೂ ಮಿಗಿಲಾದ ಶ್ರೇಷ್ಠ ಪಾಠ.

ಮುಕ್ತ ಮಾತುಕತೆ

ಮಕ್ಕಳಿಗೆ ಅಂಕಗಳ ಭಯಕ್ಕಿಂತ ಹೆತ್ತವರ ಪ್ರೀತಿ ಮತ್ತು ಪ್ರೋತ್ಸಾಹ ಮುಖ್ಯ. ಅಂಕ ಕಡಿಮೆ ಬಂದರೆ ಬೈಯುತ್ತಾರೆ ಎಂಬ ಭಯದಲ್ಲಿ ಮಕ್ಕಳು ಸುಳ್ಳು ಹೇಳಲು ಕಲಿಯುತ್ತಾರೆ ಅಥವಾ ಖಿನ್ನತೆಗೆ ಒಳಗಾಗುತ್ತಾರೆ. ಇದರ ಬದಲಾಗಿ, ಅವರ ಪ್ರಯತ್ನವನ್ನು ಮೆಚ್ಚಿ, ಸೋತಾಗ ಬೆನ್ನು ತಟ್ಟುವ ತಂದೆ-ತಾಯಿ ಸಿಕ್ಕರೆ ಮಕ್ಕಳು ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ.

ಮಗುವಿನ ಬಾಲ್ಯವು ನಗು, ಆಟ, ಗೆಳೆತನ ಮತ್ತು ಮಾನವೀಯತೆಯ ಹೂದೋಟವಾಗಬೇಕು. ಇಂದಿನಿಂದಲೇ ನಿಮ್ಮ ಮಗು ಶಾಲೆಯಿಂದ ಬಂದಾಗ ಮಾರ್ಕ್ಸ್ ಎಷ್ಟು? ಎಂದು ಕೇಳುವ ಬದಲು, ಇವತ್ತು ನಿನ್ನ ಮುಖದಲ್ಲಿ ನಗು ತಂದ ಸಂಗತಿ ಯಾವುದು? ಎಂದು ಪ್ರೀತಿಯಿಂದ ಕೇಳಿ ನೋಡಿ. ಉತ್ತರ ಕೊಡುವಾಗ ಆ ಮಗುವಿನ ಮುಖದ ಮೇಲೆ ಅರಳುವ ನಗು ನಿಮ್ಮ ಇಡೀ ದಿನದ ಆಯಾಸವನ್ನು ಮರೆಸುತ್ತದೆ.

Must Read

Skip to toolbar