ಹೊಸದಿಗಂತ ವರದಿ ಕಾರವಾರ:
ಉತ್ತರಪ್ರದೇಶ ಮೂಲದ ಕ್ಷೌರಿಕ ಲೈಂಗಿಕ ದೌರ್ಜನ್ಯ ಎಸಗಿರುವ ಆತಂಕಕಾರಿ ಘಟನೆ ತಾಲೂಕಿನ ಮಾಜಾಳಿಯಲ್ಲಿ ನಡೆದಿದ್ದು ಬಾಲಕಿಯ ಪಾಲಕರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಜಾಳಿಯ ವಾಣಿಜ್ಯ ಮಳಿಗೆಯೊಂದರಲ್ಲಿ ಸೆಲೂನ್ ನಡೆಸುತ್ತಿದ್ದ ಇಕ್ಬಾಲ್ ಎನ್ನುವವರ ಬಳಿ ಕ್ಷೌರಿಕ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸಂಶಾದ್ ಎಂಬಾತನೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯಾಗಿದ್ದು ಆರೋಪಿತನಿಂದ ದೌರ್ಜನ್ಯಕ್ಕೊಳಗಾದ ಬಾಲಕಿ ಕೂಗಿಕೊಂಡಿದ್ದರಿಂದ ಸಮೀಪದಲ್ಲಿದ್ದ ಬಾಲಕಿಯ ತಾಯಿ ಮತ್ತು ಅಕ್ಕ ಓಡಿ ಬಂದು ವಿಚಾರಿಸಿದಾಗ ವಿಷಯ ತಿಳಿದು ಬಂದಿದೆ.
ಘಟನೆಯ ನಂತರ ತಲೆಮರೆಸಿಕೊಂಡ ಆರೋಪಿತನ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು ಚಿತ್ತಾಕುಲ ಪೊಲೀಸರು ಆರೋಪಿತನ ಪತ್ತೆಗೆ ಬಲೆ ಬೀಸಿದ್ದಾರೆ. ಜಿಲ್ಲೆಯ ಮುಂಡಗೋಡದ ತಾಲೂಕಿನಲ್ಲಿ ಇತ್ತೀಚೆಗೆ ಇಸ್ಮಾಯಿಲ್ ಎಂಬಾತ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿತ್ತಲ್ಲದೇ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿ ಸಂಪೂರ್ಣ ಮುಂಡಗೋಡ ಬಂದ್ ಮಾಡುವ ಮೂಲಕ ಆರೋಪಿತನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ ಕೇಳಿ ಬಂದಿತ್ತು ಮುಂಡಗೋಡ ಘಟನೆ ನಡೆದ ಕೆಲವೇ ದಿನಗಳಲ್ಲಿ ಕಾರವಾರದ ಮಾಜಾಳಿಯಲ್ಲಿ ಇನ್ನೊಂದು ಘಟನೆ ನಡೆದಿರುವುದು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತಂತೆ ಪೋಷಕರಲ್ಲಿ ಚಿಂತೆಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಉತ್ತರ ಪ್ರದೇಶ,ಬಿಹಾರ,ಪಶ್ಚಿಮ ಬಂಗಾಲದ ಕಡೆಯವರು ಹೇರ್ ಕಟಿಂಗ್ ಸೆಲೂನ್ ಗಳನ್ನು ತೆರೆದು ಕ್ಷೌರಿಕ ಕೆಲಸ ಮಾಡುತ್ತಿದ್ದು ಪ್ರತಿ ತಾಲೂಕುಗಳಲ್ಲಿ ಇವರ ಸಂಖ್ಯೆ ಹೆಚ್ಚತೊಡಗಿದೆ ಉತ್ತರ ಭಾರತ ಮೂಲದ ಇವರ ಪೂರ್ವಾಪರದ ಕುರಿತಂತೆ ವಿಚಾರಣೆ ನಡೆಸುವ ಕೆಲಸ ಆರಕ್ಷಕ ಇಲಾಖೆಯಿಂದ ಆಗಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.



