ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಧಿ ಕುಟುಂಬದ ಸದಸ್ಯರ ಸಾವಿನ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿರುವ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ವಿರುದ್ಧ ಶಿಮ್ಲಾದಲ್ಲಿ ಎಫ್‌ಐಆರ್ ದಾಖಲಾಗಿದೆ. ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ನೀಡಿದ ದೂರಿನ ಮೇರೆಗೆ ಹಿಮಾಚಲ ಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಕಂಗನಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದು ಶಾಂತಿ ಕದಡುವ ಪೋಸ್ಟ್ ಆಗಿದೆ ಎಂದು ನಿವೃತ್ತ ಕ್ಯಾಪ್ಟನ್ ಅತುಲ್ ಶರ್ಮಾ ದೂರಿದ್ದಾರೆ.
ಏನಂತ ಪೋಸ್ಟ್ ಮಾಡಿದ್ರು ಕಂಗನಾ?
ಎಲ್ಲರೂ ಎನ್‌ವಿಡಿಯೋ ಹನಿಟ್ರ್ಯಾಪ್ ವಿವಾದದ ಬಗ್ಗೆ ಮಾತನಾಡ್ತಿದ್ದೀರಿ. ನಾನು ಎಮರ್ಜೆನ್ಸಿ ಸಿನಿಮಾ ಮಾಡುವಾಗ ಭಾರತದ ರಾಜಕೀಯ ಹಾಗೂ ಗಾಂಧಿ ಕುಟುಂಬದ ಬಗ್ಗೆ ತುಂಬಾ ಸಂಶೋಧನೆ ಮಾಡಿದ್ದೇನೆ. ಒಂದು ವಿಷಯ ಮಾತ್ರ ಈಗಲೂ ನನಗೆ ಅರ್ಥವಾಗುತ್ತಾ ಇಲ್ಲ. ಒಬ್ಬ ನಿಗೂಢ ವಿದೇಶಿ ಪ್ರಜೆ ಗಾಂಧಿ ಕುಟುಂಬದವನ್ನು ಪ್ರವೇಶಿಸುತ್ತಾರೆ. ಆನಂತರ ಇಂದಿರಾ ಗಾಂಧಿ ಹತ್ಯೆಯಾಗುತ್ತದೆ. ನಂತರ ಸಂಜಯ್ ಗಾಂಧಿ ಆಮೇಲೆ ರಾಜೀವ್ ಗಾಂಧಿ. ಹೀಗೆ ಅಧಿಕಾರ ವಹಿಸಿಕೊಳ್ಳಬೇಕಾಗಿದ್ದ ಎಲ್ಲ ಸಂಭಾವ್ಯ ಉತ್ತರಾಧಿಕಾರಿಗಳ ಮಿಸ್ಟೀರಿಯಸ್ ಡೆತ್ ಆಗುತ್ತದೆ. ಕೊನೆಗೆ ಅನುಕಂಪದ ಮೇಲೆ ಸೋನಿಯಾ ಗಾಂಧಿ ಎನ್ನುವ ವಿದೇಶಿ ಪ್ರಜೆ ಗದ್ದುಗೆ ಏರುತ್ತಾರೆ ಎಂದು ಹೇಳಿದ್ದಾರೆ.
ಇಲ್ಲಿ ಹಲವಾರು ಕಾಕತಾಳೀಯ ಘಟನೆಗಳು ನಡೆದಿವೆ ಎಂದು ಜನರು ಯೋಚಿಸಲೇ ಇಲ್ಲ. ಅಷ್ಟೇ ಅಲ್ಲದೆ, ಆ ವಿದೇಶಿ ಮಹಿಳೆ ಬಹಿರಂಗವಾಗಿಯೇ ವಿದೇಶಿ ಅಜೆಂಡಾಗಳನ್ನು ಪ್ರಚಾರ ಮಾಡಿದರು. ಭಯೋತ್ಪಾದಕರಿಗಾಗಿ ಮೊಸಳೆ ಕಣ್ಣೀರು ಸುರಿಸಿದರು. ಆದರೂ 2014ರ ಬದಲಾವಣೆ ಬರುವವರೆಗೂ, ದಶಕಗಳ ಕಾಲ ಸರ್ಕಾರವನ್ನು ಮುನ್ನಡೆಸುವಲ್ಲಿ ಅವರು ಯಶಸ್ವಿಯಾದರು ಎಂದಿದ್ದಾರೆ.
ಗಾಂಧಿ ಕುಟುಂಬದಲ್ಲಿ ನಡೆದ ಕೊಲೆಗಳಿಗೆ ಸೋನಿಯಾ ಗಾಂಧಿ ಕಾರಣ ಎಂದು ಪರೋಕ್ಷವಾಗಿ ನಟಿ ಹೇಳಿದ್ದು ಕಾಂಟ್ರವರ್ಸಿಗೆ ಕಾರಣವಾಗಿದೆ.



