ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಸಮಾವೇಶಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಜಮೆಯಾಗುವ ಜನರ ಸಂಖ್ಯೆ ಹಾಗೂ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಇದರ ಪ್ರಕಾರ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡಲು ಇಚ್ಛಿಸುವವರು ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ಮಾತ್ರ ಪ್ರತಿಭಟಿಸಬೇಕು. ಅಷ್ಟೇ ಅಲ್ಲದೇ 50,000 ಜನರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಕೇಂದ್ರ ದೆಹಲಿಯ ಈ ಸ್ಥಳದಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನ ಸುರಕ್ಷತೆ, ಭದ್ರತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳ ನಿರ್ದಿಷ್ಟ ಚೌಕಟ್ಟಿನ ಅಡಿಯಲ್ಲಿ ತರುವುದು ಈ ನಿಯಮಗಳ ಉದ್ದೇಶವಾಗಿದೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಪೊಲೀಸರು ಹೇಳಿದ್ದರು. ಇದಕ್ಕೆ ಪರ್ಯಾಯವಾಗಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡಬಹುದು ಎಂದು ಹೇಳಿದ್ದರು. ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಿತ್ತು. ಮತಗಳ್ಳತನ, ಚುನಾವಣಾ ಆಯೋಗದ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಹಾಗೂ ಎಸ್ಐಆರ್ ಪ್ರತಿಕ್ರಿಯೆ ವಿರೋಧಿಸಿ ರ್ಯಾಲಿ ನಡೆಸಿತ್ತು. ಈ ರ್ಯಾಲಿಯಲ್ಲಿ 10 ಲಕ್ಷ ಜನ ಪಾಲ್ಗೊಂಡಿದ್ದಾಗಿ ಕಾಂಗ್ರೆಸ್ ಹೇಳಿತ್ತು. ಈ ಬೆನ್ನಲ್ಲೇ ಹೊಸ ರೂಲ್ಸ್ ರಿಲೀಸ್ ಮಾಡಲಾಗಿದೆ.
ನಿರ್ಧಾರಗಳೇನು?
ಪ್ರತಿಭಟಿಸಲು 50,000 ಜನರಿಗೆ ಮಾತ್ರ ಅವಕಾಶ. ಅದಾಗ್ಯೂ ಕಾರ್ಯಕ್ರಮದ ಸ್ವರೂಪವನ್ನು ನೋಡಿಕೊಂಡು ಎಷ್ಟು ಜನರಿಗೆ ಪರ್ಮಿಷನ್ ಕೊಡಬಹುದು ಎನ್ನುವುದನ್ನು ಪ್ರಾಧಿಕಾರ ನಿರ್ಧರಿಸುತ್ತದೆ. ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಈ ಎಸ್ಒಪಿ ಅನುಷ್ಠಾನಗೊಳಿಸಲು ಕರಡನ್ನು ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲೇ ಇದ್ದು ಅದರ ನಿಬಂಧನೆಗಳನ್ನ ಇನ್ನೂ ಅಂತಿಮಗೊಳಿಸಬೇಕಾಗಿದೆ.



