November 14, 2026
Saturday, November 14, 2026
spot_img

ಕರಾವಳಿಯಲ್ಲಿ ವಂದೇ ಭಾರತ್‌ ರೈಲಿಗೆ ಅದ್ದೂರಿ ಸ್ವಾಗತ; ಸಂಸದ ಕಾಗೇರಿ ಭಾಗಿ

ಹೊಸದಿಗಂತ ವರದಿ ಅಂಕೋಲಾ:

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಚಾಲನೆ ನೀಡಿದ ಯಶವಂತಪುರ ಮಡಗಾವ್ ನೂತನ ವಂದೇ ಭಾರತ್ ರೈಲಿಗೆ ಜಿಲ್ಲೆಯಲ್ಲಿ ಭವ್ಯ ಸ್ವಾಗತ ದೊರಕಿತು.
ಪ್ರವಾಸಿ ತಾಣ ಮುರುಡೇಶ್ವರ ಮತ್ತು ಗೋಕರ್ಣ ರೋಡ್ ಮಾದನಗೇರಿ,ರೈಲ್ವೆ ನಿಲ್ದಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ತಡರಾತ್ರಿಯಾದರೂ ಜಮಾಯಿಸಿ ನೂತನ ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿದರು.

ಮುರ್ಡೇಶ್ವರ ರೈಲ್ವೆ ನಿಲ್ದಾಣಕ್ಕೆ ರಾತ್ರಿ ಆಗಮಿಸಿದ ವಂದೇ ಭಾರತ ರೈಲಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಭ್ರಮದಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಯಶವಂತಪುರ ಮಡಗಾವ್ ವಂದೇ ಭಾರತ ರೈಲು ಸಂಚಾರಕ್ಕೆ ಚಾಲನೆ ನೀಡುವ ಮೂಲಕ ರಾಜ್ಯದ ಕರಾವಳಿ ಭಾಗದ ಪ್ರವಾಸೋದ್ಯಮ ಮತ್ತು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ ಎಂದರು.

ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರಗಳನ್ನು ರಾಜ್ಯದ ರಾಜಧಾನಿಯೊಂದಿಗೆ ಬೆಸೆದಿರುವುದು ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಲಿದೆ ಎಂದ ಅವರು ಮನವಿಗೆ ಸ್ಪಂದಿಸಿ ಯೋಜನೆಯನ್ನು ಸಾಕಾರಗೊಳಿಸಿದ ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ, ಯೋಜನೆಯ ಜಾರಿಗೆ ಶ್ರಮಿಸಿದ ಮಂಗಳೂರು, ಉಡುಪಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸಂಸದರಿಗೆ,ಕೊಂಕಣ ರೈಲ್ವೆ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ವಂದೇ ಭಾರತ ರೈಲಿನಲ್ಲಿ ಪ್ರಯಾಣಿಸಿದ ಸಂಸದ ಕಾಗೇರಿ ಗೋಕರ್ಣ ರೋಡ್ ಮತ್ತು ಕಾರವಾರ ರೈಲ್ವೆ ನಿಲ್ದಾಣಗಳಲ್ಲೂ ನೂತನ ರೈಲನ್ನು ಬರಮಾಡಿಕೊಂಡು ಸಾರ್ವಜನಿಕರೊಂದಿಗೆ ಸೇರಿ ಸಂಭ್ರಮಿಸಿದರು.
ಕೊಂಕಣ ರೈಲ್ವೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು,ರೈಲ್ವೆ ಹೋರಾಟ ಸಮಿತಿಯ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Must Read