ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ದೃಢವಾಗಿ ಬದ್ಧವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬೆಂಗಳೂರಿನ ಎಥೆರಿಯಲ್ ಮೆಷಿನ್ಸ್ ಉತ್ಪಾದನಾ ಘಟಕಕ್ಕೆ ಶನಿವಾರ ಭೇಟಿ ನೀಡಿದ ಅವರು, ದೇಶದಲ್ಲಿ ಬಲಿಷ್ಠ ಮತ್ತು ಸ್ವಾವಲಂಬಿ ಸೆಮಿಕಂಡಕ್ಟರ್ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ಯೋಜನೆಗಳ ಕುರಿತು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ಮೂಲದ ಡೀಪ್ಟೆಕ್ ಉತ್ಪಾದನಾ ಕಂಪನಿಯಾದ ಎಥೆರಿಯಲ್ ಮೆಷಿನ್ಸ್ ಸುಧಾರಿತ ಸಿಎನ್ಸಿ (CNC) ಯಂತ್ರಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸುವುದರ ಜೊತೆಗೆ ವಿವಿಧ ಕೈಗಾರಿಕೆಗಳಿಗೆ ಅಗತ್ಯವಾದ ಅತ್ಯಂತ ನಿಖರವಾದ ಬಿಡಿಭಾಗಗಳನ್ನು ತಯಾರಿಸುತ್ತಿದೆ ಎಂದರು.
ಸೆಮಿಕಂಡಕ್ಟರ್ ಉತ್ಪಾದನೆಗೆ ಅಗತ್ಯವಿರುವ ಸುಧಾರಿತ ಯಂತ್ರೋಪಕರಣಗಳು ಮತ್ತು ನಿಖರವಾದ ಬಿಡಿಭಾಗಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಿ ಉತ್ಪಾದಿಸುವುದು ಅತ್ಯಗತ್ಯ. ಇದರಿಂದ ದೇಶೀಯ ಉತ್ಪಾದನಾ ವ್ಯವಸ್ಥೆ ಬಲಗೊಳ್ಳುವುದರ ಜೊತೆಗೆ ಆಮದುಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ ಎಂದರು.

ಎಥೆರಿಯಲ್ ಮೆಷಿನ್ಸ್ ಘಟಕವು 2 ಮೈಕ್ರಾನ್ನಿಂದ 20 ಮೈಕ್ರಾನ್ಗಳವರೆಗಿನ ನಿಖರತೆಯಲ್ಲಿ ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಂತಹ ವಿಶೇಷ ಬಿಡಿಭಾಗಗಳನ್ನು ಈ ಹಿಂದೆ ಮುಖ್ಯವಾಗಿ ಜರ್ಮನಿ ಮತ್ತು ಜಪಾನ್ನಂತಹ ದೇಶಗಳಿಂದ ಪಡೆಯಲಾಗುತ್ತಿತ್ತು ಎಂದು ಸಚಿವರು ವಿವರಿಸಿದರು.
ದೇಶೀಯವಾಗಿ ಇಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸುವುದರಿಂದ ಏರೋಸ್ಪೇಸ್, ರಕ್ಷಣಾ ವಲಯ, ವೈದ್ಯಕೀಯ ತಂತ್ರಜ್ಞಾನ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಆಮದು ಅವಲಂಬನೆ ಕಡಿಮೆ ಮಾಡಿ ಸ್ವಾವಲಂಬಿ ಭಾರತದ ಗುರಿಯನ್ನು ಸಾಧಿಸಲು ಇದು ನೆರವಾಗಲಿದೆ ಎಂದು ಅವರು ಹೇಳಿದರು.
ದೇಶದಲ್ಲೇ ಸುಧಾರಿತ ತಂತ್ರಜ್ಞಾನ ಮತ್ತು ನಿಖರ ಬಿಡಿಭಾಗಗಳ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ಜಾಗತಿಕ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.



