November 14, 2026
Saturday, November 14, 2026
spot_img

ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿ: ಪಾವತಿಸದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಹೆಸ್ಕಾಂ ಎಚ್ಚರಿಕೆ

ಹೊಸದಿಗಂತ ವರದಿ ಬೆಳಗಾವಿ:

 ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದಲ್ಲಿ ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ ಕಟ್ಟಡದ ವಿದ್ಯುತ್ ಬಿಲ್ ಬಾಕಿ ವಿಚಾರ ಮುನ್ನೆಲೆಗೆ ಬಂದಿದೆ. ಕಳೆದ ಮೂರು ತಿಂಗಳಿಂದ ಹೆಸ್ಕಾಂಗೆ ಸುಮಾರು 11 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ, ಕೂಡಲೇ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೆಸ್ಕಾಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸುವರ್ಣಸೌಧದ ನಿರ್ವಹಣೆಯ ಹೊಣೆ ಲೋಕೋಪಯೋಗಿ ಇಲಾಖೆಯ ಮೇಲಿದೆ. ಆದರೆ, ಕಟ್ಟಡದ ನಿರ್ವಹಣೆಗಾಗಿ ಸರ್ಕಾರದಿಂದ ವಿಶೇಷ ಅನುದಾನ ನಿಯಮಿತವಾಗಿ ಬಿಡುಗಡೆಯಾಗುತ್ತಿಲ್ಲ. ವಿದ್ಯುತ್ ಬಿಲ್ ಪಾವತಿಸುವಂತೆ ಹೆಸ್ಕಾಂ ಅಧಿಕಾರಿಗಳು ಈಗಾಗಲೇ ಮೌಖಿಕ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:

ಪ್ರತಿ ವರ್ಷ ಸುವರ್ಣಸೌಧದ ನಿರ್ವಹಣೆಗೆ ಸುಮಾರು 2.20 ಕೋಟಿ ರೂ. ಅಗತ್ಯವಿದೆ. ಪ್ರಸಕ್ತ ಸಾಲಿನ ನಿರ್ವಹಣೆಗಾಗಿ ಲೋಕೋಪಯೋಗಿ ಇಲಾಖೆ 2.20 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದರೂ, ಆರ್ಥಿಕ ಇಲಾಖೆಯಿಂದ ಇನ್ನೂ ಅನುಮೋದನೆ ದೊರೆತಿಲ್ಲ.

ಚಳಿಗಾಲದ ಅಧಿವೇಶನ ಆರಂಭಕ್ಕೆ ದಿನಗಣನೆ ಶುರುವಾಗಿರುವ ಸಂದರ್ಭದಲ್ಲೇ ನಿರ್ವಹಣಾ ಅನುದಾನ ಬಿಡುಗಡೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಶಕ್ತಿ ಸೌಧವೆಂದೇ ಗುರುತಿಸಿಕೊಂಡಿರುವ ಸುವರ್ಣಸೌಧದ ನಿರ್ವಹಣೆಗೆ ಅಗತ್ಯ ಅನುದಾನ ಒದಗಿಸದಿರುವ ಸರ್ಕಾರದ ಕ್ರಮದ ಕುರಿತು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Must Read

Skip to toolbar