ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ನೇಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತೀವ್ರಗೊಳ್ಳುತ್ತಿದ್ದು, ನವೆಂಬರ್ 17ರ ವೇಳೆಗೆ ಇದು ಪ್ರಬಲ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಚಂಡಮಾರುತದ ಪ್ರಭಾವದಿಂದ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
ಶನಿವಾರ (ನವೆಂಬರ್ 14) ಆಗ್ನೇಯ ಬಂಗಾಳಕೊಲ್ಲಿಯಲ್ಲಿದ್ದ ತೀವ್ರ ಕಡಿಮೆ ಒತ್ತಡದ ಪ್ರದೇಶವು ವಾಯುವ್ಯ ದಿಕ್ಕಿನತ್ತ ಚಲಿಸಿ, ಭಾನುವಾರ ಮುಂಜಾನೆ 5:30ರ ವೇಳೆಗೆ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ. ಇದು ಇದೇ ದಿಕ್ಕಿನಲ್ಲಿ ಮುಂದುವರಿದು, ನವೆಂಬರ್ 16ರಂದು ಮಧ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಬಳಿಕ ನವೆಂಬರ್ 17ರ ಹೊತ್ತಿಗೆ ಮತ್ತಷ್ಟು ಶಕ್ತಿ ಪಡೆದು ತೀವ್ರ ಚಂಡಮಾರುತವಾಗಿ ಅಪ್ಪಳಿಸುವ ಲಕ್ಷಣಗಳಿವೆ ಎಂದು ಹವಾಮಾನ ವರದಿ ತಿಳಿಸಿದೆ.
ಪ್ರಾದೇಶಿಕ ಹವಾಮಾನ ಕೇಂದ್ರವು ಭಾನುವಾರ ಮಧ್ಯಾಹ್ನ 1 ಗಂಟೆಗೆ ತುರ್ತು ಮುನ್ಸೂಚನೆ ನೀಡಿದ್ದು, ಕಡಲೂರು, ಚೆಂಗಲ್ಪಟ್ಟು, ಮೈಲಾಡುತುರೈ, ನಾಗಪಟ್ಟಣಂ, ಪುದುಕ್ಕೊಟ್ಟೈ, ತಂಜಾವೂರು, ತಿರುವರೂರು, ವಿಲ್ಲುಪುರಂ ಜಿಲ್ಲೆಗಳು ಸೇರಿದಂತೆ ಪುದುಚೇರಿ ಮತ್ತು ಕಾರೈಕಲ್ನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ಸೋಮವಾರದಿಂದ (ನವೆಂಬರ್ 16) ತಮಿಳುನಾಡಿನ ಉತ್ತರ ಜಿಲ್ಲೆಗಳ ಜೊತೆಗೆ ಪಶ್ಚಿಮ ಘಟ್ಟದ ಪ್ರದೇಶಗಳು ಹಾಗೂ ದಕ್ಷಿಣದ ಜಿಲ್ಲೆಗಳಲ್ಲೂ ಮಳೆ ಚುರುಕಾಗಲಿದೆ. ಕಳೆದ 24 ಗಂಟೆಗಳಲ್ಲಿ ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶಕ್ಕೆ ಯಾವುದೇ ಮಳೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಚಂಡಮಾರುತದ ಚಲನವಲನಗಳನ್ನು ಗಮನಿಸಿ ದಿನದ ಅಂತ್ಯದ ವೇಳೆಗೆ ಆಂಧ್ರಪ್ರದೇಶದ ಹವಾಮಾನ ಮುನ್ಸೂಚನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಕರಾವಳಿ ಭಾಗದ ಜನರು ಮತ್ತು ಮೀನುಗಾರರು ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.



