November 15, 2026
Sunday, November 15, 2026
spot_img

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ: ‘ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕೆದಾಟು ಅಣೆಕಟ್ಟು ಯೋಜನೆಯ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಕಾಂಗ್ರೆಸ್ ಘಟಕಗಳ ನಡುವೆ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನೆರೆಯ ತಮಿಳುನಾಡಿಗೆ ತಿರುಗೇಟು ನೀಡಿರುವ ಅವರು, “ಅವರು ರಾಜಕೀಯವಾಗಿ ವಿರೋಧಿಸಬಹುದು, ನಾವು ಅವರ ಧ್ವನಿಯನ್ನು ತಡೆಯುವುದಿಲ್ಲ; ಆದರೆ ನಾವು ನಮ್ಮ ಕೆಲಸ ಮಾಡಲೇಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.

ಕಾನೂನಿಗೆ ಗೌರವ, ನಮ್ಮ ಕೆಲಸಕ್ಕೆ ಬದ್ಧ

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, “ನಾನು ಈಗಾಗಲೇ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನಾವು ಈ ದೇಶದ ಕಾನೂನನ್ನು ಗೌರವಿಸಬೇಕು ಮತ್ತು ನ್ಯಾಯಾಲಯ ಏನು ಹೇಳುತ್ತದೆಯೋ ಅದನ್ನು ಜಾರಿಗೊಳಿಸಬೇಕು. ತಮಿಳುನಾಡಿನವರು ರಾಜಕೀಯವಾಗಿ ಇದನ್ನು ವಿರೋಧಿಸುತ್ತಿದ್ದಾರೆ. ಚೆನ್ನೈನಲ್ಲಿ ಅವರ ಬಳಿ ದೊಡ್ಡ ಕಾನೂನು ತಂಡವೇ ಇದೆ, ಇರಲಿ ಬಿಡಿ. ಅವರಿಗೆ ವಾಸ್ತವ ಅರ್ಥವಾಗಿದ್ದರೂ ವಿರೋಧಿಸುತ್ತಿದ್ದಾರೆ. ನಾವು ಅವರ ಧ್ವನಿಯನ್ನು ನಿಲ್ಲಿಸುವುದಿಲ್ಲ, ಆದರೆ ರಾಜ್ಯದ ಜನರಿಗೆ ನೀರು ಕೊಡುವ ನಮ್ಮ ಬದ್ಧತೆಯನ್ನು ನಾವು ಪೂರೈಸುತ್ತೇವೆ” ಎಂದು ಹೇಳಿದರು.

ಕಾನೂನು ನಮ್ಮ ಪರವಾಗಿದೆ ಎಂದ ಪ್ರಿಯಾಂಕ್ ಖರ್ಗೆ

ಇದೇ ವೇಳೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಉಭಯ ರಾಜ್ಯಗಳ ನಾಯಕರು ತಮ್ಮ ರಾಜ್ಯಗಳ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದಾರೆ ಎಂದರು. “ತಮಿಳುನಾಡು ಪಿಸಿಸಿ ಅಧ್ಯಕ್ಷರು ತಮ್ಮ ರಾಜ್ಯದ ಹಿತಾಸಕ್ತಿ ರಕ್ಷಿಸಲು ಹೇಳಿಕೆಗಳನ್ನು ನೀಡುತ್ತಾರೆ. ಅದೇ ರೀತಿ ಕರ್ನಾಟಕದ ಹಿತಾಸಕ್ತಿ ಕಾಪಾಡುವುದು ಮುಖ್ಯಮಂತ್ರಿಗಳು ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ. ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದ್ದು, ಕಾನೂನು ನಮ್ಮ ಪರವಾಗಿದೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ. ಈ ಬಗ್ಗೆ ಮಾತುಕತೆ ನಡೆಸಲು ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು ಸಿಎಂಗೆ ಆಹ್ವಾನವನ್ನೂ ನೀಡಿದ್ದರು. ಎಲ್ಲರೂ ಕಾನೂನನ್ನು ಪಾಲಿಸಬೇಕು” ಎಂದು ತಿಳಿಸಿದರು.

ದೆಹಲಿ ಪ್ರವಾಸ

ಸೋಮವಾರ ದೆಹಲಿಗೆ ತೆರಳುತ್ತಿರುವ ಕುರಿತು ಮಾಹಿತಿ ನೀಡಿದ ಸಿಎಂ ಶಿವಕುಮಾರ್, “ನಮ್ಮ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಬಂದಿರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ” ಎಂದರು. ಸಚಿವ ಸಂಪುಟಕ್ಕೆ ಮಹಿಳೆಯರನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ಮಾತನಾಡಿ, “ಈಗಾಗಲೇ ಪಕ್ಷದ ವರಿಷ್ಠರ ಮುಂದೆ ನನ್ನ ಮನವಿ ಇಟ್ಟಿದ್ದೇನೆ. ಅವರು ಕರೆದಾಗ ಸೂಕ್ತ ಸಮಯದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ:

ಏನಿದು ವಿವಾದ?

ಮೇಕೆದಾಟು ಯೋಜನೆ ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರೆ, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಠಾಗೋರ್ ಇದನ್ನು ತೀವ್ರವಾಗಿ ವಿರೋಧಿಸಿ, ಇದು ತಮಿಳುನಾಡು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು. ಇದರಿಂದಾಗಿ ಕಾವೇರಿ ನದಿ ನೀರು ಹಂಚಿಕೆ ವಿವಾದವು ಮತ್ತೊಮ್ಮೆ ಉಭಯ ರಾಜ್ಯಗಳ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Must Read

Skip to toolbar