November 15, 2026
Sunday, November 15, 2026
spot_img

‘ಭಾರತವು ದೇಶೀಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದೆ’: ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಿದ ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಕ್ಷಣಾ ಉಪಕರಣಗಳ ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ಗುಣಮಟ್ಟವನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಕೇವಲ ದೋಷಗಳನ್ನು ಪತ್ತೆಹಚ್ಚುವ ಬದಲು, ಅವು ಸಂಭವಿಸದಂತೆ ಮೊದಲೇ ತಡೆಯುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾನುವಾರ ನಡೆದ ‘ನಾನ್-ಡಿಸ್ಟ್ರಕ್ಟಿವ್ ಎವಲ್ಯೂಷನ್ ಮತ್ತು ಎನೇಬ್ಲಿಂಗ್ ಟೆಕ್ನಾಲಜೀಸ್’ ಕುರಿತ 36ನೇ ವಾರ್ಷಿಕ ಸಮ್ಮೇಳನ ಹಾಗೂ ಏರೋಸ್ಪೇಸ್‌ನಲ್ಲಿ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ ಕುರಿತ 15ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಅವರು ಮಾತನಾಡಿದರು.

ದೇಶೀಯ ರಕ್ಷಣಾ ವಲಯದ ಸಾಧನೆಗೆ ಮೆಚ್ಚುಗೆ

ಭಾರತವು ತನ್ನ ದೇಶೀಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಸಚಿವರು ತಿಳಿಸಿದರು. ಕ್ಷಿಪಣಿ ಅಭಿವೃದ್ಧಿ, ನೌಕಾಪಡೆಯ ವೇದಿಕೆಗಳು, ಏರೋಸ್ಪೇಸ್ ಎಂಜಿನಿಯರಿಂಗ್, ರೇಡಾರ್ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಸಾಧನೆಗಳು ಭಾರತೀಯ ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ಕೈಗಾರಿಕಾ ಪಾಲುದಾರರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ ಎಂದರು. ವಿಶೇಷವಾಗಿ ದೇಶದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾದ ಮೊದಲ ದೇಶೀಯ ವಿಮಾನವಾಹಕ ನೌಕೆ ‘ಐಎನ್‌ಎಸ್ ವಿಕ್ರಾಂತ್’ ಸೇರ್ಪಡೆಯು ಈ ಪಯಣದ ಪ್ರಮುಖ ಮೈಲಿಗಲ್ಲು ಎಂದು ತಿಳಿಸಿದರು.

ಸಣ್ಣ ದೋಷವೂ ಕಾರ್ಯಾಚರಣೆಗೆ ಅಪಾಯ

ರಕ್ಷಣಾ ವ್ಯವಸ್ಥೆಯು ಅತ್ಯಾಧುನಿಕವಾಗುತ್ತಿರುವಂತೆಯೇ, ಪ್ರತಿಯೊಂದು ಬಿಡಿಭಾಗ ಮತ್ತು ಉತ್ಪಾದನಾ ಪ್ರಕ್ರಿಯೆಯು ಅತ್ಯುನ್ನತ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. “ಉಪಕರಣಗಳಲ್ಲಿ ಅಡಗಿರುವ ಸಣ್ಣ ದೋಷವು ಅವುಗಳ ಕಾರ್ಯಾಚರಣೆಯ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು, ನಿರ್ವಹಣಾ ವೆಚ್ಚವನ್ನು ಹೆಚ್ಚಿಸಬಹುದು ಮತ್ತು ಉಪಕರಣದ ಜೀವಿತಾವಧಿಯನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ನಿರ್ಣಾಯಕ ಸಂದರ್ಭಗಳಲ್ಲಿ ಇಡೀ ಕಾರ್ಯಾಚರಣೆಯ ಯಶಸ್ಸನ್ನೇ ಅಪಾಯಕ್ಕೆ ತಳ್ಳಬಹುದು” ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಗುಣಮಟ್ಟವೇ ರಾಷ್ಟ್ರದ ಪ್ರಗತಿಗೆ ಮಾನದಂಡ

ಯಾವುದೇ ದೇಶದ ಪ್ರಗತಿಯು ಅದು ಅಭಿವೃದ್ಧಿಪಡಿಸುವ ತಂತ್ರಜ್ಞಾನದ ಮೇಲೆ ಮಾತ್ರವಲ್ಲದೆ, ಅದು ನಿರ್ಮಿಸುವ ವ್ಯವಸ್ಥೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ. ರಕ್ಷಣೆಯಂತಹ ಆಯಕಟ್ಟಿನ ಕ್ಷೇತ್ರಗಳಲ್ಲಿ ಯಾವುದೇ ವೈಫಲ್ಯವು ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ವೈರಲ್ ಜ್ವರದ ಕಾರಣದಿಂದ ತಮಗೆ ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಸಚಿವರು, ಸಮ್ಮೇಳನ ಆಯೋಜಿಸಿದ ಭಾರತೀಯ ನಾನ್-ಡಿಸ್ಟ್ರಕ್ಟಿವ್ ಟೆಸ್ಟಿಂಗ್ ಸೊಸೈಟಿಯ ಪ್ರಯತ್ನಗಳನ್ನು ಅಭಿನಂದಿಸಿದರು.

Must Read

Skip to toolbar