November 15, 2026
Sunday, November 15, 2026
spot_img

ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ: 192 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪುಣೆಯಿಂದ ಗುವಾಹಟಿಗೆ 192 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಭಾನುವಾರ ಬೆಳಿಗ್ಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ವಿಮಾನವನ್ನು ಪುಣೆ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಹೇಗೆ?

ಇಂಡಿಗೋ ಸಂಸ್ಥೆಯ ‘6E 0623 (VT-IZE)’ ವಿಮಾನವು ಭಾನುವಾರ ಬೆಳಿಗ್ಗೆ ಪುಣೆ ವಿಮಾನ ನಿಲ್ದಾಣದಿಂದ ಗುವಾಹಟಿಯತ್ತ ಟೇಕ್ ಆಫ್ ಆಗಿತ್ತು. ಆದರೆ ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ, ಅದರ ‘ಲ್ಯಾಂಡಿಂಗ್ ಗೇರ್’ ಒಳಕ್ಕೆ ಹೋಗದೆ ಹೊರಗೆಯೇ ಉಳಿದಿರುವ ತಾಂತ್ರಿಕ ದೋಷ ಪತ್ತೆಯಾಗಿದೆ. ತಕ್ಷಣವೇ ಎಚ್ಚೆತ್ತ ಪೈಲಟ್ ವಾಯು ಸಂಚಾರ ನಿಯಂತ್ರಣ (ATC) ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಿದರು.

ವಿಮಾನ ನಿಲ್ದಾಣದಲ್ಲಿ ‘ಪೂರ್ಣ ತುರ್ತುಸ್ಥಿತಿ’ ಘೋಷಣೆ

ಪೈಲಟ್ ಸಂದೇಶ ಬರುತ್ತಿದ್ದಂತೆಯೇ ಪುಣೆ ವಿಮಾನ ನಿಲ್ದಾಣದ ಅಧಿಕಾರಿಗಳು, ಎಟಿಸಿ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದವು. ನಿಲ್ದಾಣದಲ್ಲಿ ‘ಪೂರ್ಣ ತುರ್ತುಸ್ಥಿತಿ’ ಘೋಷಿಸಿ, ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಯಿತು. ಲ್ಯಾಂಡಿಂಗ್ ಗೇರ್ ಸ್ಥಿತಿಯನ್ನು ಕಣ್ಣಾರೆ ಪರಿಶೀಲಿಸಲು ವಿಮಾನವನ್ನು ರನ್‌ವೇ ಮೇಲೆ ತೀರಾ ಕೆಳಮಟ್ಟದಲ್ಲಿ ಹಾರಿಸಲಾಯಿತು. ಬಳಿಕ ಬೆಳಿಗ್ಗೆ 9:04ಕ್ಕೆ ವಿಮಾನವು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಯಿತು.

ಇದನ್ನೂ ಓದಿ:

ಎಲ್ಲಾ ಪ್ರಯಾಣಿಕರು ಸುರಕ್ಷಿತ

ವಿಮಾನ ಇಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳ ಕಣ್ಗಾವಲಿನಲ್ಲಿ ವಿಮಾನವನ್ನು ಬೇ ಸಂಖ್ಯೆ 7ಕ್ಕೆ ಕೊಂಡೊಯ್ಯಲಾಯಿತು. ವಿಮಾನ ಸುರಕ್ಷಿತವಾಗಿದೆ ಎಂದು ಖಚಿತವಾದ ಬಳಿಕ ಬೆಳಿಗ್ಗೆ 9:10ಕ್ಕೆ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು. ಏರೋಬ್ರಿಡ್ಜ್ ಮೂಲಕ ಎಲ್ಲಾ 192 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಪ್ರಯಾಣಿಕರು ಗುವಾಹಟಿಗೆ ತೆರಳಲು ಅನುಕೂಲವಾಗುವಂತೆ ಇಂಡಿಗೋ ಸಂಸ್ಥೆಯು ಬೆಂಗಳೂರಿನಿಂದ ಪುಣೆಗೆ ಬದಲಿ ವಿಮಾನದ ವ್ಯವಸ್ಥೆ ಮಾಡಿದೆ.

Must Read

Skip to toolbar