November 15, 2026
Sunday, November 15, 2026
spot_img

ಹಿಂದಿನ ಸೋಲಿಗೆ ತಕ್ಕ ಉತ್ತರ: ಕಿವೀಸ್‌ ಮಣಿಸಿ ಏಕದಿನ ಸರಣಿ ಮುಡಿಗೇರಿಸಿಕೊಂಡ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಭಾರತ ತಂಡ, 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದೊಂದಿಗೆ ತನ್ನದಾಗಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ಪಡೆ, ಈ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕಷ್ಟಕರ ಪಿಚ್‌ನಲ್ಲಿ ನಿಧಾನವಾಗಿ ರನ್ ಕಲೆಹಾಕುತ್ತಾ ಸಾಗಿ, ಅಂತಿಮವಾಗಿ 209 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು. ಆದರೆ, ಭಾರತೀಯ ಬೌಲರ್‌ಗಳು ತಮ್ಮ ಶಿಸ್ತುಬದ್ಧ ದಾಳಿಯ ಮೂಲಕ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಆಡಲು ಯಾವುದೇ ಅವಕಾಶ ನೀಡಲಿಲ್ಲ. ಕಿವೀಸ್ ಪಡೆ ಆರಂಭದಿಂದಲೂ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಗೆಲ್ಲಲು 210 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಭಾರತದ ಮಾರಕ ಬೌಲಿಂಗ್ ದಾಳಿಗೆ ನಲುಗಿ ಕೇವಲ 187 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮ ಹಂತದಲ್ಲಿ ಕಿವೀಸ್ ಆಟಗಾರರು ಗೆಲುವಿಗಾಗಿ ಹೋರಾಡಿದರೂ, ಟೀಮ್ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನ ಭಾರತಕ್ಕೆ 22 ರನ್‌ಗಳ ರೋಚಕ ಹಾಗೂ ಸ್ಮರಣೀಯ ಜಯ ತಂದುಕೊಟ್ಟಿತು.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡ, ಮೂರನೇ ಪಂದ್ಯವು ಮಳೆಯಿಂದ ರದ್ದಾದ ಬಳಿಕ ನಾಲ್ಕನೇ ಪಂದ್ಯದಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತ್ತು. ಆದರೆ, ಒತ್ತಡದ ಪರಿಸ್ಥಿತಿಯನ್ನು ಮೀರಿ ನಿಂತ ಭಾರತೀಯ ಆಟಗಾರರು ಐದನೇ ಪಂದ್ಯದಲ್ಲಿ ಪುಟಿದೇಳುವ ಮೂಲಕ 3-1 ಅಂತರದಲ್ಲಿ ಸರಣಿಯನ್ನು ಗೆದ್ದು ಬೀಗಿದ್ದಾರೆ.

Must Read

Skip to toolbar