November 15, 2026
Sunday, November 15, 2026
spot_img

ಟ್ರೆಕ್ಕಿಂಗ್‌ಗೆ ಹೋಗಿ ಕಾಡಿನಲ್ಲಿ ಕಳೆದುಹೋದ ಯೂಟ್ಯೂಬರ್: ರೋಪ್ ಮೂಲಕ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾಹಸಮಯ ಟ್ರೆಕ್ಕಿಂಗ್ ಮಾಡುವ ಉತ್ಸಾಹದಲ್ಲಿ ಒಬ್ಬರೇ ಬೆಟ್ಟ ಹತ್ತಿದ ಯೂಟ್ಯೂಬರ್, ಕೊನೆಗೆ ಕಾಡಿನ ಮಧ್ಯೆ ದಾರಿ ಕಾಣದೆ ಪರದಾಡಿದ ಘಟನೆ ರಾಮನಗರದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಅದೃಷ್ಟವಶಾತ್, ಸಮಯಪ್ರಜ್ಞೆ ಮೆರೆದು 112 ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರಿಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ವಾಪಸ್ ಬರಲು ಪರದಾಟ

ಬಿಸ್ವಾಜಿತ್ ನಾಥ್ ಎಂಬ ಯೂಟ್ಯೂಬರ್ ಭಾನುವಾರ ಬೆಳಗ್ಗೆ ಬೈಕ್‌ನಲ್ಲಿ ಒಬ್ಬರೇ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಆಗಮಿಸಿದ್ದರು. ಬಳಿಕ ಟ್ರೆಕ್ಕಿಂಗ್ ಆರಂಭಿಸಿ ಬೆಟ್ಟದ ಅರಣ್ಯ ಪ್ರದೇಶದೊಳಗೆ ಸಾಗಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ನಂತರ ವಾಪಸ್ ಬರುವ ದಾರಿ ಕಾಣದೆ ಕಾಡಿನಲ್ಲೇ ಸಿಲುಕಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಅವರು ತಕ್ಷಣ 112ಕ್ಕೆ ಕರೆ ಮಾಡಿ ನೆರವು ಕೋರಿದ್ದಾರೆ.

ಇದನ್ನೂ ಓದಿ:

ಮಾಹಿತಿ ದೊರೆಯುತ್ತಿದ್ದಂತೆಯೇ ರಾಮನಗರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಬೆಟ್ಟದ ತಪ್ಪಲಿನಿಂದ ಶೋಧ ಕಾರ್ಯ ಆರಂಭಿಸಿದ ತಂಡ, ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಬಿಸ್ವಾಜಿತ್ ಅವರನ್ನು ಪತ್ತೆಹಚ್ಚಿದೆ. ಬಳಿಕ ಹಗ್ಗದ (ರೋಪ್) ಸಹಾಯದಿಂದ ಸುರಕ್ಷಿತವಾಗಿ ಬೆಟ್ಟದಿಂದ ಕೆಳಕ್ಕೆ ಕರೆತರಲಾಗಿದೆ.

ರಕ್ಷಣೆಯ ಬಳಿಕ ಮಾತನಾಡಿದ ಬಿಸ್ವಾಜಿತ್, ಕಾಡಿನಲ್ಲಿ ಸಿಲುಕಿದ್ದಾಗ ತೀವ್ರ ಭಯವಾಗಿತ್ತು. ಸಿಲುಕಿದ್ದ ಸ್ಥಳದಿಂದ ಸ್ವತಃ ಹೊರಬರಲು ಪ್ರಯತ್ನಿಸಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ನಿರಂತರ ಸಂಪರ್ಕದಲ್ಲಿದ್ದು ನೆರವು ನೀಡಿದರು ಎಂದು ತಿಳಿಸಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

Must Read