ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಜಪಾನ್‌ನಲ್ಲಿ ನಡೆಯುತ್ತಿರುವ ಕುಮಾಮೊಟೊ ಮಾಸ್ಟರ್ಸ್ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಟೂರ್ನಿಯ ಆರಂಭದಿಂದಲೂ ಈವರೆಗೆ ಯಾವ ಭಾರತೀಯ ಆಟಗಾರನೂ ಮಾಡದ ಸಾಧನೆಯನ್ನು ಲಕ್ಷ್ಯ ಸೇನ್ ತಮ್ಮದಾಗಿಸಿಕೊಂಡಿದ್ದಾರೆ. ನವೆಂಬರ್ 14ರಂದು ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಆರನೇ ಶ್ರೇಯಾಂಕದ ಆಟಗಾರ ಅಲ್ವಿ ಫರ್ಹಾನ್ ಅವರನ್ನು ಮಣಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಕುಮಾಮೊಟೊ ಮಾಸ್ಟರ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
70 ನಿಮಿಷಗಳ ರೋಚಕ ಸೆಮಿಫೈನಲ್
ಇತ್ತೀಚೆಗಷ್ಟೇ ಹೈಲೋ ಓಪನ್ ಪ್ರಶಸ್ತಿ ಗೆದ್ದಿದ್ದ ಲಕ್ಷ್ಯ ಸೇನ್ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. 70 ನಿಮಿಷಗಳ ಕಾಲ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ 21-12, 15-21, 21-11 ಅಂತರದಲ್ಲಿ ಗೆಲುವು ದಾಖಲಿಸಿದರು. ಮೊದಲ ಗೇಮ್‌ನಲ್ಲಿ ಸುಲಭ ಮುನ್ನಡೆ ಸಾಧಿಸಿದ ಲಕ್ಷ್ಯಗೆ ಎರಡನೇ ಗೇಮ್‌ನಲ್ಲಿ ಫರ್ಹಾನ್ ಪ್ರಬಲ ಪೈಪೋಟಿ ನೀಡಿದರು. ಆದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮತ್ತೆ ತಮ್ಮ ಆಟದ ಲಯ ಕಂಡುಕೊಂಡ ಲಕ್ಷ್ಯ ಎದುರಾಳಿಯನ್ನು ಮಣಿಸಿ ಫೈನಲ್ ಟಿಕೆಟ್ ಖಚಿತಪಡಿಸಿಕೊಂಡರು.
ಇದನ್ನೂ ಓದಿ:
ಈ ಗೆಲುವಿನೊಂದಿಗೆ ಪ್ರಸಕ್ತ ಋತುವಿನಲ್ಲಿ ಬಿ.ಡಬ್ಲ್ಯು.ಎಫ್ ವರ್ಲ್ಡ್ ಟೂರ್ ಸರಣಿಯಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆಯನ್ನೂ ಮಾಡಿದ್ದಾರೆ. ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಕುನ್ಲಾವುತ್ ವಿಟಿಡ್ಸಾರ್ನ್ ಅಥವಾ ಜಪಾನ್‌ನ ಕೊಕಿ ವಟನಾಬೆ ಅವರನ್ನು ಎದುರಿಸಲಿದ್ದಾರೆ.
ಶ್ರೇಯಾಂಕದಲ್ಲೂ ಮಹತ್ವದ ಮುನ್ನಡೆ ನಿರೀಕ್ಷೆ
ಪ್ರಸ್ತುತ ವಿಶ್ವ ಟೂರ್ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿರುವ ಲಕ್ಷ್ಯ ಸೇನ್‌ಗೆ ಈ ಟೂರ್ನಿಯ ಪ್ರಶಸ್ತಿ ಗೆಲುವು ಮಹತ್ವದ್ದಾಗಿದೆ. ಸೂಪರ್ 500 ಟೂರ್ನಿಯಲ್ಲಿ ಚಾಂಪಿಯನ್ ಆದರೆ 9,200 ಅಂಕಗಳು ಹಾಗೂ ರನ್ನರ್ ಅಪ್ ಆದರೆ 7,800 ಅಂಕಗಳು ಲಭಿಸಲಿವೆ. ಇದರಿಂದ ಋತುವಿನ ಅಂತ್ಯದ ಟೂರ್ನಿಗೆ ಅರ್ಹತೆ ಪಡೆಯಲು ಅಗತ್ಯವಿರುವ ಅಗ್ರ ಎಂಟರೊಳಗೆ ಸ್ಥಾನ ಪಡೆಯುವ ಅವಕಾಶ ಹೆಚ್ಚಲಿದೆ.



