November 15, 2026
Sunday, November 15, 2026
spot_img

ಕಾಡಿನಿಂದ ನಕ್ಸಲರ ಅಟ್ಟಹಾಸ ಅಂತ್ಯ, ಈಗ ‘ದಿಮಾಗಿ ನಕ್ಸಲರ’ ಮೇಲೆ ಕಣ್ಣು: ನಿತಿನ್ ನಬೀನ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಛತ್ತೀಸ್‌ಗಢವನ್ನು ನಕ್ಸಲ್ ಮುಕ್ತಗೊಳಿಸುವಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ನೇತೃತ್ವದ ಸರ್ಕಾರ ಮಹತ್ವದ ಸಾಧನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಶ್ಲಾಘಿಸಿದ್ದಾರೆ. ಆದರೆ, ಕಾಡುಗಳಲ್ಲಿ ಸಶಸ್ತ್ರ ನಕ್ಸಲರ ಪ್ರಭಾವ ಕಡಿಮೆಯಾಗಿದ್ದರೂ, ವಿವಿಧ ಸಂಘಟನೆಗಳ ನಾಯಕತ್ವದಲ್ಲಿರುವ ‘ದಿಮಾಗಿ ನಕ್ಸಲರು’ ಇನ್ನೂ ಸಕ್ರಿಯರಾಗಿದ್ದಾರೆ. ಇಂತಹವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.

ನಕ್ಸಲಿಸಂ ನಿರ್ಮೂಲನೆ ಪ್ರಧಾನಿ ಮೋದಿ ಅವರ ಸಂಕಲ್ಪ

ಛತ್ತೀಸ್‌ಗಢದ ಧರಮ್‌ಜೈಗಢದಲ್ಲಿ ಭಾನುವಾರ ನಡೆದ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ನಕ್ಸಲಿಸಂ ನಿರ್ಮೂಲನೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಈ ಗುರಿ ಸಾಧಿಸಲು ಶ್ರಮಿಸಿವೆ ಎಂದರು.

ಬಸ್ತಾರ್‌ನ ಹಿಂದೆ ಬಂದೂಕು ತರಬೇತಿ ನಡೆಯುತ್ತಿದ್ದ ಪ್ರದೇಶಗಳು ಇಂದು ಕ್ರೀಡಾಂಗಣಗಳಾಗಿ ಬದಲಾಗುತ್ತಿವೆ. ಅಲ್ಲಿನ ಮಕ್ಕಳು ಶಿಕ್ಷಣ ಮತ್ತು ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ನಬೀನ್ ಹೇಳಿದರು. ನಕ್ಸಲ್ ವಿರುದ್ಧದ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೂ ಗೌರವ ಸಲ್ಲಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದಿನ ಸರ್ಕಾರಗಳು ಬುಡಕಟ್ಟು ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿವೆ ಎಂದು ಆರೋಪಿಸಿದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪನೆಯಾಗಿದ್ದನ್ನು ಸ್ಮರಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಛತ್ತೀಸ್‌ಗಢದಲ್ಲಿ 18 ಲಕ್ಷ ಮನೆಗಳನ್ನು ಒದಗಿಸುವ ಗುರಿಯೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ. ಯೋಜನೆ ಅನುಷ್ಠಾನದಲ್ಲೂ ರಾಜ್ಯ ಉತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಮುಂದಿನ ದಿನಗಳಲ್ಲಿ ಪ್ರತಿಯೊಂದು ಅರ್ಹ ಕುಟುಂಬಕ್ಕೂ ಪಡಿತರ, ವಸತಿ, ಆಯುಷ್ಮಾನ್ ಕಾರ್ಡ್ ಮತ್ತು ಅರಣ್ಯ ಹಕ್ಕುಗಳ ಸೌಲಭ್ಯ ತಲುಪಿಸುವುದು, ಮಕ್ಕಳಿಗೆ ಶಿಕ್ಷಣ ಹಾಗೂ ಯುವಕರಿಗೆ ಕ್ರೀಡೆ ಮತ್ತು ಕೌಶಲ ತರಬೇತಿ ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದರು.

ಬಂದೂಕಿನ ಬದಲಿಗೆ ಸಂವಾದ, ಭಯದ ಬದಲಿಗೆ ವಿಶ್ವಾಸ ಮತ್ತು ಅಭಿವೃದ್ಧಿಯೊಂದಿಗೆ ಬುಡಕಟ್ಟು ಸಂಸ್ಕೃತಿಯ ಸಂರಕ್ಷಣೆ ಎಂಬ ಮೂರು ಸಂಕಲ್ಪಗಳ ಮೂಲಕ ಛತ್ತೀಸ್‌ಗಢದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ವಾವಲಂಬನೆಯ ಹೊಸ ಅಧ್ಯಾಯ ಬರೆಯಬೇಕು ಎಂಬ ಆಶಯವನ್ನು ನಿತಿನ್ ನಬೀನ್ ವ್ಯಕ್ತಪಡಿಸಿದರು.

Must Read

Skip to toolbar