November 15, 2026
Sunday, November 15, 2026
spot_img

ಜೈನ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ತಕ್ಷಣ ಅಭಿವೃದ್ಧಿ ನಿಗಮ ಸ್ಥಾಪಿಸಿ: ಲಿಂಗರಾಜ ಪಾಟೀಲ ಆಗ್ರಹ

ಹೊಸದಿಗಂತ ವರದಿ ಹುಬ್ಬಳ್ಳಿ:

ಬಹುದಿನಗಳಿಂದ ಕೇಳಿಬರುತ್ತಿರುವ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಯ ಬೇಡಿಕೆಯನ್ನು ಈಡೇರಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಇನ್ನಾದರೂ ಪ್ರಾಮಾಣಿಕವಾಗಿ ಮುಂದಾಗಬೇಕು. ಸಮಾಜದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ರಾಷ್ಟ್ರಸಂತ ಆಚಾರ್ಯ ಶ್ರೀ 1008 ಗುಣಧರನಂದಿ ಮಹಾರಾಜರು ನೀಡಿರುವ ಗಡುವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಹಲವು ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮತ್ತು ಮಂಡಳಿಗಳನ್ನು ಸ್ಥಾಪಿಸಿರುವ ಸರ್ಕಾರಕ್ಕೆ ಅಂದಾಜು 5ಲಕ್ಷ ವರೆಗೆ ಜನಸಂಖ್ಯೆ ಹೊಂದಿರುವ ಜೈನ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲು ಏಕೆ ಸಾಧ್ಯವಾಗುತ್ತಿಲ್ಲ? ಜೈನ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಯಾವ ಅಡ್ಡಿಯಿದೆ? ಎಂದು ಪ್ರಶ್ನಿಸಿದ್ದಾರೆ.

ಆಚಾರ್ಯ ಗುಣಧರನಂದಿ ಮಹಾರಾಜರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಹಲವು ಬಾರಿ ಮನವಿ ಸಲ್ಲಿಸಿ ಚರ್ಚೆ ನಡೆಸಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಸರ್ಕಾರಕ್ಕೆ ನೀಡಿದ್ದ ಹತ್ತು ದಿನಗಳ ಗಡುವು ಮುಗಿದರೂ ಯಾವುದೇ ಅಧಿಕೃತ ಲಿಖಿತ ಭರವಸೆ ಸಿಗದಿರುವುದು ವಿಷಾದನೀಯ.

ಇದನ್ನೂ ಓದಿ:

ಇದೀಗ ಡಿಸೆಂಬರ್ 4ರಿಂದ ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸುವ ನಿರ್ಧಾರ ಕೈಗೊಂಡಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಂತರ ಸ್ವಯಂ ದೇಹತ್ಯಾಗಕ್ಕೆ ಸಲ್ಲೇಖನ ಆರಂಭಿಸುವುದಾಗಿ ವಾಗ್ದಾನ ಮಾಡಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಜೈನ ಸಮಾಜದ ಮುಖಂಡರು ಹಾಗೂ ಧಾರ್ಮಿಕ ಗುರುಗಳ ಸಭೆ ಕರೆದು, ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟದ ಅನುಮೋದನೆ ಪಡೆದು ಅಧಿಕೃತ ಘೋಷಣೆ ಮಾಡಬೇಕು. ಕೇವಲ ದೂರವಾಣಿ ಭರವಸೆ ಅಥವಾ ಸಮಾಧಾನದ ಮಾತುಗಳಿಗೆ ಸೀಮಿತವಾಗದೆ, ಕಾಲಮಿತಿಯೊಳಗೆ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಲಿಂಗರಾಜ ಪಾಟೀಲ ಒತ್ತಾಯಿಸಿದ್ದಾರೆ.

Must Read