November 15, 2026
Sunday, November 15, 2026
spot_img

ಕಿವೀಸ್ ನೆಲದಲ್ಲಿ ಟೀಂ ಇಂಡಿಯಾ ಹ್ಯಾಟ್ರಿಕ್ ಸರಣಿ ಗೆಲುವು: ಬೌಲರ್‌ಗಳ ಹೋರಾಟಕ್ಕೆ ಅಯ್ಯರ್ ಸಲಾಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನ್ಯೂಜಿಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಬೌಲರ್‌ಗಳ ಸಂಘಟಿತ ಹೋರಾಟದ ನೆರವಿನಿಂದ ಭಾರತ ಏಕದಿನ ಸರಣಿಯನ್ನು 3-1 ಅಂತರದಲ್ಲಿ ಗೆದ್ದುಕೊಂಡಿದೆ. ತಂಡದ ಈ ಸಾಧನೆಗೆ ಬೌಲರ್‌ಗಳ ಪ್ರದರ್ಶನ ಮತ್ತು ಆಟಗಾರರ ಒಗ್ಗಟ್ಟಿನ ಮನೋಭಾವವೇ ಪ್ರಮುಖ ಕಾರಣ ಎಂದು ಭಾರತ ತಂಡದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇ ಓವಲ್‌ನಲ್ಲಿ ಭಾನುವಾರ ನಡೆದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 22 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಮೂರನೇ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಈ ಹಿಂದೆ 2009 ಮತ್ತು 2018-19ರಲ್ಲಿ ಭಾರತ ಸರಣಿ ಜಯಿಸಿತ್ತು.

ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಇಡೀ ಸರಣಿಯಲ್ಲಿ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರ ಪರಿಸ್ಥಿತಿ ಇರಲಿಲ್ಲ. ಇಂತಹ ಸವಾಲಿನ ಸಂದರ್ಭದಲ್ಲೂ ಬೌಲರ್‌ಗಳು ಜವಾಬ್ದಾರಿ ವಹಿಸಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಪ್ರತಿಯೊಬ್ಬ ಆಟಗಾರನಲ್ಲೂ ಇಂತಹ ಆತ್ಮವಿಶ್ವಾಸ ಮತ್ತು ಹೋರಾಟದ ಗುಣ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ:

ಐದನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 42.1 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟ್ ಆಯಿತು. ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ತಲಾ 46 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 22 ರನ್ ಕೊಡುಗೆ ನೀಡಿದರು.

ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ 48.1 ಓವರ್‌ಗಳಲ್ಲಿ 187 ರನ್‌ಗಳಿಗೆ ಕುಸಿಯಿತು. ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.

ಇದೇ ವೇಳೆ ತಂಡದ ಆಟಗಾರರ ಬದಲಾವಣೆ, ಗಾಯದ ಸಮಸ್ಯೆಗಳ ನಡುವೆಯೂ ಯಾರೂ ನೆಪ ಹೇಳದೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದಾರೆ ಎಂದು ಅಯ್ಯರ್ ತಿಳಿಸಿದರು.

Must Read

Skip to toolbar