ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಯಲಹಂಕ ನ್ಯೂಟೌನ್‌ನಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. ಚರಣ್ ಕೊಲ್ಲಲು ಬರೋಬ್ಬರಿ ₹30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಚರಣ್ ಅವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕಿರಣ್ ಎಂಬಾತ ರುದ್ರೇಶ್ ಎನ್ನುವವನಿಗೆ ₹30 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಸುಪಾರಿ ಪಡೆದ ರುದ್ರೇಶ್ ಲೋಕೇಶ್, ಆಕಾಶ್ ಎನ್ನುವವರ ಮೂಲಕ ಹತ್ಯೆ ಮಾಡಿಸುವ ಪ್ಲಾನ್ ಮಾಡಿದ್ದ. ಚರಣ್‌ರನ್ನು ಲೋಕೇಶ್ ಹಾಗೂ ಆಕಾಶ್ ಹತ್ಯೆಗೂ ಮುನ್ನ ಒಂದೆರಡು ದಿನ ಫಾಲೋ ಮಾಡಿದ್ದರು. ಚರಣ್ ಆಫೀಸ್‌ಗೆ ಎಷ್ಟೊತ್ತಿಗೆ ಬರುತ್ತಾರೆ, ಮನೆಗೆ ಎಷ್ಟೊತ್ತಿಗೆ ಹೋಗುತ್ತಾರೆ ಎನ್ನುವ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದರು.
ನ. 13ರಂದು ಚರಣ್ ತಮ್ಮ ಪತ್ನಿ ಜೊತೆ ಕಚೇರಿಗೆ ಬಂದಾಗ ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಚರಣ್ ಹಾಗೂ ಸುಪಾರಿ ನೀಡಿದ್ದ ಕಿರಣ್ ಇಬ್ಬರೂ ರಿಯಲ್ ಎಸ್ಟೇಟ್ ಪಾರ್ಟ್‌ನರ್ಸ್ ಆಗಿದ್ದರು. ಕೆಲ ವ್ಯವಹಾರಗಳ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಚರಣ್ ತನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು ಎಂದು ಕಿರಣ್ ಆರೋಪಿಸಿದ್ದರು. ನಂತರ ಅವರ ಜೊತೆ ವ್ಯವಹಾರ ಮಾಡುವುದಿಲ್ಲ ಎಂದು ಹೊರಗೆ ಬಂದಿದ್ದರು. ಆದರೆ ಚರಣ್ ವಿರುದ್ಧದ ದ್ವೇಷ ಮಾತ್ರ ಕಡಿಮೆಯಾಗಿರಲಿಲ್ಲ. ಇದೇ ಕಾರಣಕ್ಕೆ ಚರಣ್ ಅವರನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಕಿರಣ್, ರುದ್ರೇಶ್ ಜೊತೆ ಮಾತುಕತೆ ನಡೆಸಿ ₹30 ಲಕ್ಷಕ್ಕೆ ಸುಪಾರಿ ನೀಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.



