November 16, 2026
Monday, November 16, 2026
spot_img

ಸ್ಪೇನ್ ಅಜೇಯ ಓಟಕ್ಕೆ ಬ್ರೇಕ್: ವಿಶ್ವ ಚಾಂಪಿಯನ್‌ಗೆ ಆಘಾತ ನೀಡಿದ ಇಂಗ್ಲೆಂಡ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಫುಟ್‌ಬಾಲ್‌ನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಜೇಯವಾಗಿ ಮುನ್ನುಗ್ಗುತ್ತಿದ್ದ ಹಾಲಿ ವಿಶ್ವ ಚಾಂಪಿಯನ್ ಸ್ಪೇನ್ ತಂಡದ ಸೋಲಿನ ಸರಪಳಿ ಕೊನೆಗೂ ಮುರಿದುಬಿದ್ದಿದೆ. ನವೆಂಬರ್ 15ರಂದು ಮ್ಯಾಡ್ರಿಡ್‌ನ ಮೆಟ್ರೋಪಾಲಿಟಾನೊ ಕ್ರೀಡಾಂಗಣದಲ್ಲಿ ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 3-2 ಗೋಲುಗಳ ರೋಚಕ ಜಯ ದಾಖಲಿಸಿದೆ. ಈ ಮೂಲಕ ಸ್ಪೇನ್‌ನ ಬರೋಬ್ಬರಿ 43 ಪಂದ್ಯಗಳ ವಿಶ್ವದಾಖಲೆಯ ಅಜೇಯ ಓಟಕ್ಕೆ ಇಂಗ್ಲೆಂಡ್‌ ತೆರೆ ಎಳೆದಿದೆ.

ತವರಿನ ಪ್ರೇಕ್ಷಕರ ಎದುರು ಕಣಕ್ಕಿಳಿದ ಸ್ಪೇನ್‌ಗೆ, ಥಾಮಸ್ ಟುಚೆಲ್ ಮಾರ್ಗದರ್ಶನದ ಇಂಗ್ಲೆಂಡ್ ಆರಂಭದಲ್ಲೇ ಶಾಕ್ ನೀಡಿತು. ಮೊದಲಾರ್ಧದ ಕೊನೆಯಲ್ಲಿ ಸಿಕ್ಕ ಪೆನಾಲ್ಟಿಯನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದ ನಾಯಕ ಹ್ಯಾರಿ ಕೇನ್ ತಂಡಕ್ಕೆ ಮುನ್ನಡೆ ತಂದರು. ಇನ್ನು ದ್ವಿತೀಯಾರ್ಧದಲ್ಲೂ ಬಿರುಸಿನ ಆಟವಾಡಿದ ಎಜ್ರಿ ಕೊನ್ಸಾ ಮತ್ತು ಬೆನ್ ವೈಟ್ ತಲಾ ಒಂದು ಗೋಲು ಬಾರಿಸಿ, ಕೇವಲ ಒಂದು ಗಂಟೆಯೊಳಗೆ ಇಂಗ್ಲೆಂಡ್‌ಗೆ 3-0ಯ ಭದ್ರ ಮುನ್ನಡೆ ಒದಗಿಸಿದರು.

ಪಂದ್ಯದ 63ನೇ ನಿಮಿಷದಲ್ಲಿ ದೊಡ್ಡ ತಿರುವು ಸಿಕ್ಕಿತು. ಇಂಗ್ಲೆಂಡ್ ಮಿಡ್‌ಫೀಲ್ಡರ್ ಎಲಿಯಟ್ ಆಂಡರ್ಸನ್ ರೆಡ್ ಕಾರ್ಡ್ ಪಡೆದು ಹೊರನಡೆದರು. ಈ ಅವಕಾಶ ಬಳಸಿಕೊಂಡ ಸ್ಪೇನ್‌ನ ಮೈಕೆಲ್ ಒಯರ್ಜಬಾಲ್ ಮತ್ತು ನಿಕೊ ವಿಲಿಯಮ್ಸ್ ಗೋಲು ಬಾರಿಸಿ ಅಂತರವನ್ನು 3-2ಕ್ಕೆ ತಗ್ಗಿಸಿದರು.

ಕೊನೆಯ ನಿಮಿಷಗಳಲ್ಲಿ ಸ್ಪೇನ್ ಆಟಗಾರರು ಸಮಬಲ ಸಾಧಿಸಲು ನಡೆಸಿದ ತೀವ್ರ ಪ್ರಯತ್ನಗಳನ್ನು ಇಂಗ್ಲೆಂಡ್ ಗೋಲ್‌ಕೀಪರ್ ಜೇಮ್ಸ್ ಟ್ರಾಫರ್ಡ್ ಅದ್ಭುತವಾಗಿ ವಿಫಲಗೊಳಿಸಿದರು. ವಿಶೇಷವಾಗಿ ಇಂಜುರಿ ಟೈಮ್‌ನಲ್ಲಿ ಫೆರ್ಮಿನ ಲೋಪೆಝ್ ಮತ್ತು ಐಮೆರಿಕ್ ಲ್ಯಾಪೋರ್ಟೆ ಅವರ ಗೋಲು ಪ್ರಯತ್ನಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಇಂಗ್ಲೆಂಡ್‌ಗೆ ಮರೆಯಲಾರದ ರೋಚಕ ಜಯ ತಂದುಕೊಟ್ಟರು.

Must Read

Skip to toolbar