ಹೊಸದಿಗಂತ ವರದಿ ಬೆಂಗಳೂರು:
ಭಾರತದ ಭವಿಷ್ಯವೇ ಇಂದಿನ ಮಕ್ಕಳು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಮಗ್ರ ಕಲಿಕೆಯ ಅವಶ್ಯಕತೆಯಿದೆ. ಆ ಸದುದ್ದೇಶವನ್ನು ಆಸ್ಟ್ರಿಡ್ ಶಿಕ್ಷಣ ಸಂಸ್ಥೆ ನೆರವೇರಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವ ಡಾ. ಸಿ.ಎನ್ ಮಂಜುನಾಥ್ ಹೇಳಿದರು.
ಗುರುಕುಲ ಪದ್ದತಿಯ ಉತ್ತಮ ಅಂಶಗಳು ಮತ್ತು ಆಧುನಿಕ ವಿಜ್ಞಾನದ ಶಿಕ್ಷಣ ಪದ್ಧತಿಗಳನ್ನು ಸಮ್ಮಿಳಿತಗೊಳಿಸಿ ವಿದ್ಯಾರ್ಥಿಗಳಲ್ಲಿ ಹೊಸತನದಿಂದ ಯೋಚಿಸುವ ಪಠ್ಯಕ್ರಮ ಅಳವಡಿಸುವ ನೂತನ ಸಂಸ್ಥೆಯಾಗಿ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಸಂಸ್ಥೆಯ ಲೋಗೋವನ್ನು ನವೆಂಬರ್ 15 ರಂದು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಕ್ಕಳಿಗೆ ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕ ಮಾತ್ರವಲ್ಲ. ಸರಿಯಾದ ಮಾರ್ಗದಲ್ಲಿ ಯೋಚಿಸುವುದನ್ನು ಕಲಿಸಬೇಕು. ಮಕ್ಕಳಿಗೆ ಜಗತ್ತನ್ನು ಎದುರಿಸುವ ಶಿಕ್ಷಣವನ್ನು ನೀಡಿ ಮುಂದಿನ ಪೀಳಿಗೆಗೆ ಅವರನ್ನು ಸಿದ್ಧಪಡಿಸಬೇಕು ಎಂದು ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ತಿಳಿ ಹೇಳಿದರು.
ಆಸ್ಟ್ರಿಡ್ ಸಂಸ್ಥಾಪಕ ಅಧ್ಯಕ್ಷ ಮತ್ತು ನಿರ್ದೇಶಕ ಎ.ಆರ್ ನಾಯಕ್ ಮಾತನಾಡಿ, ದೇಶ ನಿರ್ಮಾಣದ ಸಂಕಲ್ಪದೊಂದಿಗೆ ಈ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ಪ್ರತಿ ಜಿಲ್ಲೆಯ ಮಕ್ಕಳಿಗೂ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಸದುದ್ದೇಶವನ್ನು ಹೊಂದಿದೆ. ಈ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಸಂಸ್ಥೆ ಕೊಡುಗೆ ನೀಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಬೆಂಗಳೂರಿನ ಉತ್ತರ ಯಲಹಂಕ, ಪೂರ್ವ ಸರ್ಜಾಪುರ, ದಕ್ಷಿಣ–ಕಗ್ಗಲೀಪುರ, ಪಶ್ಚಿಮ–ಮಾಕಳಿ, ಗಿರಿನಗರ, ಉತ್ತರ ಕನ್ನಡದ ಮಂಕಿ–ಮುರುಡೇಶ್ವರ, ಅತ್ತಿಬೆಲೆ, ಹೊಸಕೋಟೆ ಮತ್ತು ಕನಕಪುರದಲ್ಲಿ ಕಾರ್ಯಾರಂಭಗೊಳ್ಳಲಿವೆ. ಈ ವಿದ್ಯಾ ಸಂಸ್ಥೆಗಳಲ್ಲಿ ಸಿ.ಬಿ.ಎಸ್.ಸಿ ಪಠ್ಯಕ್ರಮಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸಮಾಜದಲ್ಲಿ ಶಿಕ್ಷಣ ವ್ಯಕ್ತಿಯ ಗೌರವ ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಸೃಜನಶೀಲತೆಯೂ ಮಕ್ಕಳ ಭವಿಷ್ಯಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ. ಮಕ್ಕಳಿಗೆ ಶಾಲಾ ಕಲಿಕೆ ಮಾತ್ರವಲ್ಲ ಮನೆಯಲ್ಲಿ ಪಾಲಕರೂ ಮಕ್ಕಳ ಶಿಕ್ಷಣದತ್ತ ಗಮನ ಹರಿಸಬೇಕು. ಇವುಗಳ ಜೊತೆಗೆ ಸಮಯ ಪ್ರಜ್ಞೆ, ಶಿಸ್ತು, ಸಾಮಾನ್ಯ ಜ್ಞಾನವೂ ಕಲಿಕಾ ಹಂತದಲ್ಲಿ ಬಹಳ ಮುಖ್ಯ ಎಂದು ಹೇಳಿದರು. ಪ್ರತಿ ಮಗುವಿಗೂ ಸಮಾನವಾಗಿ ಶಿಕ್ಷಣ ದೊರೆಯುವಂತಾಗಲಿ ಎಂದು ಆಶಿಸಿದರು.
ಸಚಿವ ಕೆಹೆಚ್ ಮುನಿಯಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ನಿಂದ ಹೆಚ್ಚಿನ ಸಹಾಯ ಸಿಗುವಂತಾಗಲಿ. ನಾವು ಓದುವ ಸಮಯದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಅವಕಾಶಗಳಿವೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ. ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಗೆ ಒಳಿತಾಗಲಿ ಎಂದು ಆಶಿಸಿದರು.
ಆಸ್ಟ್ರಿಡ್ ವರ್ಡ್ ಸ್ಕೂಲ್ ನ ನಿರ್ದೇಶಕಿ ಲಕ್ಷ್ಮಿ ಕೆ.ಕೆ ಮಾತನಾಡಿ, ನಮ್ಮ ಗುರಿ ಶಿಕ್ಷಣ ನೀಡುವುದು ಮಾತ್ರವಲ್ಲ. ನಮ್ಮ ಮೂಲ ಉದ್ದೇಶ ಮೌಲ್ಯಯುತ ಶಿಕ್ಷಣವನ್ನು ಇಂದಿನ ಪೀಳಿಗೆಗೆ ನೀಡಿ ಅವರನ್ನು ದೇಶದ ಭವಿಷ್ಯವನ್ನಾಗಿಸುವುದು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಶಿಕ್ಷಣದ ಕುರಿತು ಒಂದು ಉತ್ತಮ ಚರ್ಚೆಯ ಜತೆಗೆ ಆಸ್ಟ್ರಿಡ್ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದೆ. ಇದು ಸಂಸ್ಥೆಯ ಮೌಲ್ಯಯುತ ಶಿಕ್ಷಣ ನೀಡುವ ಉದ್ದೇಶ ಸೂಚಿಸುತ್ತದೆ. ಒಂದು ಲೋಗೋ ಸಂಸ್ಥೆಯೊಂದರ ವ್ಯಕ್ತಿತ್ವ ಹೇಳುವುದರ ಜೊತೆಗೆ ನಾವು ಉಳಿದ ಬ್ರಾಂಡ್‌ಗಳಿಗಿಂತ ಹೇಗೆ ಭಿನ್ನ ಎನ್ನುವುದನ್ನೂ ತೋರಿಸುತ್ತದೆ. ಆಸ್ಟ್ರಿಡ್ ವರ್ಡ್ ಸ್ಕೂಲ್ ನ ಲೋಗೋ ಉಳಿದ ಶಾಲೆಗಳ ಲೋಗೋಗಳಿಗಿಂತ ಭಿನ್ನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮತ್ತು ಶಾಸಕ ಆರ್ ವಿ ದೇಶಪಾಂಡೆ, ಸಚಿವ ಕೆ.ಹೆಚ್. ಮುನಿಯಪ್ಪ, ಆಸ್ಟ್ರಿಡ್ ಸಂಸ್ಥಾಪಕ ಅಧ್ಯಕ್ಷ ಹಾಗೂ ನಿರ್ದೇಶಕ ಎ.ಆರ್ ನಾಯಕ್, ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ನಿರ್ದೇಶಕ ಸುರೇಂದ್ರ ಹೆಗಡೆ, ಸಂಸದ ಡಾ. ಸಿ.ಎನ್ ಮಂಜುನಾಥ್, ಮಾಜಿ ಸಚಿವೆ ಡಾ ಜಯಮಾಲಾ ರಾಮಚಂದ್ರ, ಎಂ.ಎಲ್.ಸಿ ರವಿಕುಮಾರ್, ಡಾ. ಅಹಲ್ಯಾ ಶರ್ಮಾ, ಹನುಮಂತರಾಯಪ್ಪ, ರಾಜೀವ್ ಗಾಂಧಿ ಯುನಿವರ್ಸಿಟಿಯ ಉಪಕುಲಪತಿ ಡಾ. ಭಗವಾನ್ ಬಿ.ಸಿ, ರೇವತಿ ಕಾಮತ್, ಮಾಜಿ ಸಚಿವ ಚಂದ್ರಪ್ಪ ಹಿರಿಯ ಪತ್ರಕರ್ತರಾದ ರವಿ ಹೆಗಡೆ, ವಿಶ್ವೇಶ್ವರ ಭಟ್, ಡಾ ಮಂಜಿತ್ ಲೆಹಾ, ಡಾ ಅರ್ಪಿತ್ ಯಾದವ್ ಸೇರಿದಂತೆ ಆಸ್ಟ್ರಿಡ್ ನಿರ್ದೇಶಕರು ಹಾಗೂ ಸಿಬ್ಬಧಿ ವರ್ಗದವರು ಉಪಸ್ಥಿತರಿದ್ದರು.



