ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೇಕಾಫ್‌ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ 92 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಮಧುರೈಗೆ ತೆರಳಬೇಕಿದ್ದ ಇಂಡಿಗೋ
ಬೆಂಗಳೂರಿನಿಂದ ತಮಿಳುನಾಡಿನ ಮಧುರೈಗೆ ತೆರಳಬೇಕಿದ್ದ ಇಂಡಿಗೋ ಸಂಸ್ಥೆಯ 6ಇ6526 ವಿಮಾನದಲ್ಲಿ ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್‌ಗಾಗಿ ರನ್‌ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಅದರ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಪತ್ತೆಯಾಗಿದೆ.
ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ವಿಮಾನದ ತುರ್ತು ಬ್ರೇಕ್ ವ್ಯವಸ್ಥೆಯನ್ನು ಬಳಸಿ ಟೇಕಾಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ವೇಗವಾಗಿ ಚಲಿಸುತ್ತಿದ್ದ ವಿಮಾನವನ್ನು ರನ್‌ವೇನಲ್ಲೇ ಸುರಕ್ಷಿತವಾಗಿ ನಿಲ್ಲಿಸಲು ಸಾಧ್ಯವಾಗಿದೆ.
ಇದನ್ನೂ ಓದಿ:
ಮತ್ತೊಂದು ವಿಮಾನದ ಮೂಲಕ ಮಧುರೈ ತಲುಪಿದ ಪ್ರಯಾಣಿಕರು
ಬಳಿಕ ವಿಮಾನವನ್ನು ರನ್‌ವೇಯಿಂದ ವಾಪಸ್ ಕರೆತರಲಾಗಿದ್ದು, ಅದರಲ್ಲಿದ್ದ 92 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ನಂತರ ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ಮಧುರೈಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ.
ತಾಂತ್ರಿಕ ದೋಷ ಕಾಣಿಸಿಕೊಂಡ ವಿಮಾನವನ್ನು ಪ್ರಸ್ತುತ ದುರಸ್ತಿ ಮತ್ತು ಪರಿಶೀಲನೆಗಾಗಿ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ಸಮಸ್ಯೆಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.



