ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ ಅಜೇಯ ಶತಕವು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಯಿತು. ಕೇವಲ 7.4 ಓವರ್‌ಗಳಲ್ಲಿ 57 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ನಾಯಕ ರಜತ್ ಪಾಟಿದಾರ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದರು.
ಅಸ್ಸಾಂ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಪಾಟಿದಾರ್ ಮೈದಾನದ ನಾನಾ ದಿಕ್ಕುಗಳಿಗೆ ಚೆಂಡನ್ನು ಅಟ್ಟಿದರು. ಕೇವಲ 41 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ಅವರು, ಅಂತಿಮವಾಗಿ 48 ಎಸೆತಗಳಲ್ಲಿ ಅಜೇಯ 135 ರನ್ ಸಿಡಿಸಿದರು. ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ ಬರಾಬ್ಬರಿ 13 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ಒಟ್ಟು 110 ರನ್ ಗಳಿಸಿ ಅಬ್ಬರಿಸಿದರು.
ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿವಾಂಗ್ ಕುಮಾರ್ ಕೂಡ 61 ರನ್ ಗಳಿಸಿದರು. ಇವರಿಬ್ಬರ ಅಮೋಘ ಜೊತೆಯಾಟದ ಫಲವಾಗಿ ಮಧ್ಯಪ್ರದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
251 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಸ್ಸಾಂ ತಂಡವು ಮಧ್ಯಪ್ರದೇಶದ ಬೌಲಿಂಗ್ ದಾಳಿಯನ್ನು ಎದುರಿಸಲಾರದೆ ಕಂಗಾಲಾಯಿತು. ಅಂತಿಮವಾಗಿ ಮಧ್ಯಪ್ರದೇಶ ತಂಡವು 131 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಪಾಟಿದಾರ್ ಅವರ ಈ ಅದ್ಭುತ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.



