ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ಚರ್ಚೆಗೆ ಗ್ರಾಸವಾಗಿದೆ. ಸೀತೆಯ ಪಾತ್ರವನ್ನು ಯೋಧೆಯಂತೆ ತೋರಿಸಿರುವುದು ಮತ್ತು ಪಾತ್ರವರ್ಗದ ಆಯ್ಕೆಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈ ಎಲ್ಲಾ ಟೀಕೆಗಳನ್ನು ಮೆಟ್ಟಿ ನಿಂತಿರುವ ‘ರಾಮಾಯಣ’, ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ ಬರೋಬ್ಬರಿ 1,300 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಬರೆಯುತ್ತಿದೆ.
ಈ ಚಿತ್ರವನ್ನು ಈಗಾಗಲೇ ಎರಡು ಬಾರಿ ವೀಕ್ಷಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್ಜಿವಿ), ಭಾನುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಅತ್ಯುತ್ತಮ ಸಿನಿಮಾಗಳಿಗೂ ನನ್ನ ತಾಯಿ ಹೀಗೆ ಮಾಡಿರಲಿಲ್ಲ. ಆದರೆ, ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾದ ಟಿಕೆಟ್ಗಳನ್ನು ಖರೀದಿಸಿ ತಾವು ವಾಸಿಸುವ ಅಪಾರ್ಟ್ಮೆಂಟ್ನ ಕೆಲಸದವರು ಹಾಗೂ ವಾಚ್ಮ್ಯಾನ್ಗಳಿಗೆ ಹಂಚುತ್ತಿದ್ದಾರೆ. ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಿ ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್ ಆಗಿ ಹೊರಹೊಮ್ಮುತ್ತಿರುವ ಈ ಚಿತ್ರದ ಬಗ್ಗೆ ಕೆಲವರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಆರ್ಜಿವಿ ಕಿಡಿಕಾರಿದ್ದಾರೆ.
“ಚಿತ್ರದ ಎರಡೂ ಭಾಗಗಳಿಗೆ 4,000 ಕೋಟಿ ಖರ್ಚಾಗಿದೆ, ಹಾಗಾಗಿ ಈ ಗಳಿಕೆ ಸಾಲದು ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನನಗೆ ತಿಳಿದಿರುವ ಪ್ರಕಾರ, ‘ರಾಮಾಯಣ: ಭಾಗ-1’ರ ಅಸಲಿ ವೆಚ್ಚ 800 ಕೋಟಿಗಿಂತಲೂ ಕಡಿಮೆ ಇದೆ. ಜಾಗತಿಕ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿಗಳಿಂದಾಗಿ ನಿರ್ಮಾಣ ವೆಚ್ಚ ಮತ್ತಷ್ಟು ತಗ್ಗಿದೆ. ಅನುಭವಿ ನಿರ್ದೇಶಕರಿಗೆ ಸಿನಿಮಾ ನೋಡಿದ ತಕ್ಷಣ ಅದರ ಬಜೆಟ್ ಅಂದಾಜು ಸಿಗುತ್ತದೆ. ಎರಡೂ ಭಾಗಗಳಿಗೆ ಒಂದೇ ರೀತಿಯ ಖರ್ಚಾಗುತ್ತದೆ ಎಂದು ಭಾವಿಸುವುದು ಮೂರ್ಖತನ” ಎಂದು ವರ್ಮಾ ಸ್ಪಷ್ಟಪಡಿಸಿದ್ದಾರೆ.
ಬಜೆಟ್ನ ಬಹುಪಾಲು ಹಣವನ್ನು ‘ರಾಮಾಯಣ’ದ ಅದ್ಭುತ ಲೋಕವನ್ನು ಸೃಷ್ಟಿಸಲು ಬಳಸಲಾಗಿದೆ. ಈ ತಂತ್ರಜ್ಞಾನ ಮತ್ತು ಸೆಟ್ಗಳನ್ನು ಮುಂದಿನ ಭಾಗಕ್ಕೆ ಮಾತ್ರವಲ್ಲದೆ, ಗೇಮಿಂಗ್ ಹಾಗೂ ಇತರ ಉದ್ಯಮಗಳಿಗೂ ಬಳಸಿಕೊಳ್ಳಬಹುದು. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಈ ದೂರದೃಷ್ಟಿಯನ್ನು ಬಾಲಿವುಡ್ನ ಅನೇಕ ನಿರ್ಮಾಪಕರು ಮತ್ತು ಸ್ವಯಂಘೋಷಿತ ವಿಶ್ಲೇಷಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆರ್ಜಿವಿ ಶ್ಲಾಘಿಸಿದ್ದಾರೆ.



