November 17, 2026
Tuesday, November 17, 2026
spot_img

ಅಪ್ಪ-ಅಮ್ಮನ ನಡುವೆ ಆಗಿದ್ದು ಒಂದೇ ಜಗಳ: ರಾಜೀವ್-ಸೋನಿಯಾ ದಾಂಪತ್ಯದ ಸ್ವಾರಸ್ಯಕರ ನೆನಪು ಹಂಚಿಕೊಂಡ ರಾಹುಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಕೀಯದ ಜಂಜಾಟದ ನಡುವೆ ವೈಯಕ್ತಿಕ ಬದುಕಿನ ಅಪರೂಪದ ನೆನಪುಗಳನ್ನು ಹಂಚಿಕೊಂಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮ ತಂದೆ-ತಾಯಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಡುವಿನ ಪ್ರೀತಿಯ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಬಾಲ್ಯದಲ್ಲಿ ಕಂಡ ಪೋಷಕರ ಅನ್ಯೋನ್ಯತೆ, ಅವರ ನಡುವಿನ ಅಪರೂಪದ ಭಿನ್ನಾಭಿಪ್ರಾಯ ಹಾಗೂ ಪ್ರೇಮಕಥೆ ಆರಂಭವಾದ ಸ್ಥಳದ ನೆನಪುಗಳನ್ನು ಹಂಚಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ದೆಹಲಿಯಲ್ಲಿ ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಈ ಸ್ವಾರಸ್ಯಕರ ಸಂಗತಿಗಳನ್ನು ಮೆಲುಕು ಹಾಕಿದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ಮನೆಯಲ್ಲಿ ಪ್ರತಿದಿನ ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು ಎಂದು ಹೇಳಿದರು. ಈ ದೃಶ್ಯವನ್ನು ಪ್ರತಿದಿನ ನೋಡುತ್ತಿದ್ದ ತಮಗೆ ಜಗತ್ತಿನ ಎಲ್ಲ ತಂದೆ-ತಾಯಿಯರೂ ಇದೇ ರೀತಿ ಪ್ರೀತಿಯಿಂದ ಇರುತ್ತಾರೆ ಎಂಬ ಭಾವನೆ ಇತ್ತು. ಆದರೆ ಸ್ನೇಹಿತರ ಮನೆಗಳಿಗೆ ಹೋದಾಗ ಅಲ್ಲಿನ ಪೋಷಕರು ಪ್ರತ್ಯೇಕವಾಗಿ ಕುಳಿತಿರುವುದನ್ನು ಕಂಡು ಅಚ್ಚರಿಯಾಗುತ್ತಿತ್ತು ಎಂದು ನಗುತ್ತಲೇ ವಿವರಿಸಿದರು.

ಜೀವನದಲ್ಲಿ ನಡೆದದ್ದು ಒಂದೇ ಒಂದು ಜಗಳ

ತಂದೆ-ತಾಯಿಯ ನಡುವೆ ತಮಗೆ ನೆನಪಿರುವಂತೆ ಒಂದೇ ಒಂದು ಬಾರಿ ಜಗಳ ನಡೆದಿತ್ತು ಎಂದು ರಾಹುಲ್ ಹೇಳಿದ್ದಾರೆ. ತಮಗೆ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿಗೆ ಕಂಪ್ಯೂಟರ್ ಕೊಡಿಸುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದನ್ನು ಹೊರತುಪಡಿಸಿದರೆ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಬದುಕಿದ್ದರು ಎಂದು ಸ್ಮರಿಸಿದರು.

ಇಷ್ಟೇ ಅಲ್ಲದೆ, ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಮತ್ತು ಸೋನಿಯಾ ಮೊದಲ ಬಾರಿಗೆ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೂ ತಾವು ವಿದ್ಯಾರ್ಥಿಯಾಗಿದ್ದಾಗ ಭೇಟಿ ನೀಡಿದ್ದಾಗಿ ತಿಳಿಸಿದರು. ಆ ಸ್ಥಳವನ್ನು ನೋಡಿದಾಗ ಪೋಷಕರ ಪ್ರೇಮಕಥೆಯ ಆರಂಭದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದೆ ಎಂದರು.

ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆ

ರಾಹುಲ್ ಅವರ ಮಾತುಗಳು ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಬೆಂಬಲಿಗರು ಕುಟುಂಬದ ಪ್ರೀತಿಯ ನೆನಪುಗಳನ್ನು ಮೆಚ್ಚಿಕೊಂಡರೆ, ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಟೀಕಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

Must Read

Skip to toolbar