ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರೇಮಿಗಳು ಯಾವತ್ತೂ ಬರಬಾರದು ಅಂತ ಅಂದುಕೊಂಡಿದ್ದ ಆ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೀವಾಳವಾಗಿದ್ದ ಮಹೇಂದ್ರ ಸಿಂಗ್ ಧೋನಿ, ಇನ್ನು ಮುಂದೆ ಆಟಗಾರನಾಗಿ ಮೈದಾನಕ್ಕೆ ಇಳಿಯುವುದಿಲ್ಲ. ಬರೋಬ್ಬರಿ ಎರಡು ದಶಕಗಳ ಕಾಲ ಹಳದಿ ಜೆರ್ಸಿಯ ಘನತೆ ಹೆಚ್ಚಿಸಿದ್ದ ‘ಕ್ಯಾಪ್ಟನ್ ಕೂಲ್’, ತಮ್ಮ ಐಪಿಎಲ್ ಆಟಗಾರನ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು, 2027ರ ಸೀಸನ್ನಿಂದ ತಂಡದ ‘ಮೆಂಟರ್’ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ನವೆಂಬರ್ 17ರ ಡೆಡ್ಲೈನ್ ದಿನದಂದೇ ಹೊರಬಿತ್ತು ಶಾಕಿಂಗ್ ನ್ಯೂಸ್
ಜಹೀರ್ ಖಾನ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿದ ಕೆಲವೇ ವಾರಗಳಲ್ಲಿ, ಆಟಗಾರರ ರಿಟೆನ್ಷನ್ ಕೊನೆಯ ದಿನವಾದ ಇಂದು ಸಿಎಸ್ಕೆ ಈ ದೊಡ್ಡ ನಿರ್ಧಾರವನ್ನು ಪ್ರಕಟಿಸಿದೆ. ನವೆಂಬರ್ 17ರ ಡೆಡ್ಲೈನ್ಗೂ ಮುನ್ನವೇ ಧೋನಿ ಅವರು, “ನನ್ನನ್ನು ತಂಡದಿಂದ ಬಿಡುಗಡೆ ಮಾಡಿ” ಅಂತ ಕೇಳಿಕೊಂಡಿದ್ದರು ಎಂದು ಸಿಎಸ್ಕೆ ಮಾಲೀಕರಾದ ರೂಪಾ ಗುರುನಾಥ್ ತಿಳಿಸಿದ್ದಾರೆ.
45 ವರ್ಷದ ಧೋನಿಗೆ ಕಳೆದ ಕೆಲವು ಸಮಯದಿಂದ ಮಂಡಿ ನೋವು ತುಂಬಾ ಕಾಡುತ್ತಿತ್ತು. ಇದೇ ಕಾರಣಕ್ಕೆ 2026ರ ಐಪಿಎಲ್ನಲ್ಲಿ ತಂಡದಲ್ಲಿದ್ದರೂ ಫಿಟ್ನೆಸ್ ಸಮಸ್ಯೆಯಿಂದ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಇನ್ನು ಮುಂದೆ ಧೋನಿ ಹಳದಿ ಜೆರ್ಸಿಯಲ್ಲೇ ಕಾಣಿಸಿಕೊಂಡರೂ, ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಡುವ ಮತ್ತು ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪಿಂಗ್ ಮಾಡುವ ದೃಶ್ಯಗಳು ಕೇವಲ ಸುಂದರ ನೆನಪಾಗಿ ಉಳಿಯಲಿವೆ.
“ಧೋನಿ ಇಲ್ಲದೆ ಸಿಎಸ್ಕೆ ಇಲ್ಲ”
2008ರಲ್ಲಿ ಐಪಿಎಲ್ ಶುರುವಾದಾಗಿನಿಂದಲೂ ಧೋನಿ ಮತ್ತು ಚೆನ್ನೈ ನಡುವೆ ಇದ್ದಿದ್ದು ಕೇವಲ ಆಟದ ಸಂಬಂಧವಲ್ಲ, ಅದೊಂದು ಭಾವನಾತ್ಮಕ ಬಂಧ. ಈ ಬಗ್ಗೆ ಮಾತನಾಡಿರುವ ಸಿಎಸ್ಕೆ ಮಾಲೀಕ ಎನ್. ಶ್ರೀನಿವಾಸನ್, “ಎಂ.ಎಸ್. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ. ಕಳೆದ 20 ವರ್ಷಗಳಿಂದ ನಾವು ಗೆಲುವು, ಸೋಲು ಎಲ್ಲವನ್ನೂ ಒಟ್ಟಾಗಿ ಎದುರಿಸಿ ಬೆಳೆದಿದ್ದೇವೆ. 2008ರಲ್ಲಿ ಧೋನಿಯನ್ನು ತಂಡಕ್ಕೆ ಕರೆತಂದಿದ್ದು ನನ್ನ ಜೀವನದ ಬೆಸ್ಟ್ ನಿರ್ಧಾರ. ನಾವು ಎಂದಿಗೂ ಒಬ್ಬರನ್ನೊಬ್ಬರು ಅನುಮಾನಿಸಲಿಲ್ಲ, ಆ ನಂಬಿಕೆಯೇ ನಮ್ಮ ಪಯಣವನ್ನು ಇಷ್ಟು ದೂರ ತಂದಿತು” ಎಂದು ಭಾವುಕರಾಗಿದ್ದಾರೆ.
ಮರೆಯಲಾಗದ ದಾಖಲೆಗಳ ಸರದಾರ ‘ಮಾಹಿ’
ಧೋನಿ ನಾಯಕತ್ವದಲ್ಲಿ ಸಿಎಸ್ಕೆ 10 ಬಾರಿ ಫೈನಲ್ ತಲುಪಿ, 5 ಬಾರಿ (2010, 2011, 2018, 2021, 2023) ಐಪಿಎಲ್ ಚಾಂಪಿಯನ್ ಆಗಿ ಮೆರೆದಿದೆ. ಎರಡು ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನೂ ಗೆದ್ದಿದೆ. 2016-17ರಲ್ಲಿ ತಂಡ ಬ್ಯಾನ್ ಆದಾಗ ಪುಣೆ ಪರ ಆಡಿದ್ದ ಧೋನಿ, 2018ರಲ್ಲಿ ವಾಪಸ್ ಬಂದು ಮತ್ತೆ ಕಪ್ ಗೆದ್ದುಕೊಟ್ಟಿದ್ದರು. 2023ರ ಫೈನಲ್ನಲ್ಲಿ ಜಡೇಜಾ ಬೌಂಡರಿ ಬಾರಿಸಿ ಕಪ್ ಗೆದ್ದಾಗ, ಧೋನಿ ಅವರನ್ನು ಎತ್ತಿಕೊಂಡು ಸಂಭ್ರಮಿಸಿದ್ದೇ ಅವರ ಕೊನೆಯ ಪಂದ್ಯ ಇರಬಹುದು ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಮಂಡಿ ಆಪರೇಷನ್ ಮಾಡಿಸಿಕೊಂಡು 2024 ಮತ್ತು 2025ರಲ್ಲೂ ಕೊನೆಯ ಓವರ್ಗಳಲ್ಲಿ ಬಂದು ಸಿಕ್ಸರ್ಗಳ ಸುರಿಮಳೆಗೈದು ಅಭಿಮಾನಿಗಳನ್ನು ರಂಜಿಸಿದ್ದರು.
ಒಟ್ಟು 278 ಐಪಿಎಲ್ ಪಂದ್ಯಗಳನ್ನಾಡಿರುವ ಧೋನಿ, 5,439 ರನ್, 24 ಅರ್ಧಶತಕ, 264 ಸಿಕ್ಸರ್ ಹಾಗೂ 375 ಬೌಂಡರಿಗಳೊಂದಿಗೆ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರನಾಗಿ ನಿವೃತ್ತಿಯಾಗಿದ್ದಾರೆ.
ಯುವ ಆಟಗಾರರಿಗೆ ಮಾರ್ಗದರ್ಶಕನಾಗಿ ಹೊಸ ಇನ್ನಿಂಗ್ಸ್
ಸಿಎಸ್ಕೆ ಸಹ-ಮಾಲೀಕರು ರೂಪಾ ಗುರುನಾಥ್ ಮತ್ತು ಎಂಡಿ ಕೆ.ಎಸ್. ವಿಶ್ವನಾಥನ್ ಮಾತನಾಡಿ, “ಮೈದಾನದ ಒಳಗೆ ಮತ್ತು ಹೊರಗೆ ಧೋನಿ ತಂಡಕ್ಕೆ ಕೊಟ್ಟಿರುವ ಕೊಡುಗೆಯನ್ನು ಅಳೆಯಲು ಸಾಧ್ಯವಿಲ್ಲ. ಅವರ ನಾಯಕತ್ವ, ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿ ನಿಜಕ್ಕೂ ವಿಶೇಷ. ನಾವು ಗೆದ್ದ ಟ್ರೋಫಿಗಳ ಜೊತೆಗೆ, ಅವುಗಳನ್ನು ಗೆದ್ದ ರೀತಿಯೂ ಸದಾ ನೆನಪಿನಲ್ಲಿರುತ್ತೆ. ಈಗ ತಂಡ ಬದಲಾವಣೆಯ ಹಂತದಲ್ಲಿದ್ದು, ಯುವ ಆಟಗಾರರನ್ನು ತಯಾರು ಮಾಡಲು ಮೆಂಟರ್ ಆಗಿ ಧೋನಿ ಮಾರ್ಗದರ್ಶನ ನಮಗೆ ದೊಡ್ಡ ಶಕ್ತಿಯಾಗಲಿದೆ” ಎಂದಿದ್ದಾರೆ.



