November 17, 2026
Tuesday, November 17, 2026
spot_img

ಕ್ವಾಡ್ ನಾಯಕರ ಫೋಟೋಶೂಟ್‌ನಲ್ಲಿ ಮೋದಿ ವಿಶೇಷ ನಡೆ: ಭಾರತದ ಧ್ವಜದ ಗುರುತು ಎತ್ತಿಕೊಂಡು ಜೇಬಿನಲ್ಲಿಟ್ಟ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವ ಮತ್ತು ರಾಷ್ಟ್ರಧ್ವಜದ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಇದೀಗ ಗಮನ ಸೆಳೆದಿದೆ.

ಕ್ವಾಡ್ ನಾಯಕರ ಗುಂಪು ಛಾಯಾಚಿತ್ರದ ವೇಳೆ ನೆಲದ ಮೇಲೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾರ್ಡ್‌ ಅನ್ನು ಪ್ರಧಾನಿ ಮೋದಿ ಸ್ವತಃ ಬಾಗಿ ಎತ್ತಿ ಜೇಬಿನಲ್ಲಿಟ್ಟುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳವಾರ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಆಸಿಯಾನ್ ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ 2024ರ ಬಳಿಕ ಮೊದಲ ಬಾರಿಗೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಗುಂಪು ಛಾಯಾಚಿತ್ರದ ಸಿದ್ಧತೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ತ್ರಿವರ್ಣ ಧ್ವಜ ಹೊಂದಿದ್ದ ಗುರುತುಪಟ್ಟಿ ಎತ್ತಿಕೊಂಡ ಪ್ರಧಾನಿ

ನಾಯಕರಿಗೆ ಛಾಯಾಚಿತ್ರಕ್ಕಾಗಿ ನಿಲ್ಲಬೇಕಾದ ಸ್ಥಳವನ್ನು ಗುರುತಿಸಲು ನೆಲದ ಮೇಲೆ ಸಣ್ಣ ಬಿಳಿ ಬಣ್ಣದ ಗುರುತುಪಟ್ಟಿಗಳನ್ನು ಇರಿಸಲಾಗಿತ್ತು. ಈ ಪೈಕಿ ಭಾರತದ ತ್ರಿವರ್ಣ ಧ್ವಜ ಹೊಂದಿದ್ದ ಗುರುತುಪಟ್ಟಿ ನೆಲದ ಮೇಲಿರುವುದನ್ನು ಗಮನಿಸಿದ ಮೋದಿ, ತಕ್ಷಣವೇ ಬಾಗಿ ಅದನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಟ್ರಂಪ್, ಮೋದಿ ಸೇರಿದಂತೆ ನಾಲ್ವರು ನಾಯಕರು ಭಾಗಿ

ಈ ಗುಂಪು ಛಾಯಾಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್ ಪ್ರಧಾನಿ ಸನಾ ತಕೈಚಿ ಭಾಗವಹಿಸಿದ್ದರು.

ಇಂಡೋ-ಪೆಸಿಫಿಕ್ ಸಹಕಾರಕ್ಕೆ ಒತ್ತು

ಕ್ವಾಡ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಒಕ್ಕೂಟವನ್ನು ರಚನಾತ್ಮಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ ಎಂದು ಬಣ್ಣಿಸಿದ್ದಾರೆ. ಕಡಲ ಭದ್ರತೆ, ಪೂರೈಕೆ ಸರಪಳಿ, ಹೊಸ ತಂತ್ರಜ್ಞಾನ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.

Must Read