ಹೊಸದಿಗಂತ ವರದಿ ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೇರೆಯಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಬಳಿ ವಿಜಯನಗರ ಸಾಮ್ರಾಜ್ಯದ ಪತನದ ನಂತರದ ಪಾಳೇಗಾರರ ಆಡಳಿತಾವಧಿಗೆ ಸಂಬಂಧಿಸಿದ ಅಪರೂಪದ ಶಾಸನವೊಂದು ಪತ್ತೆಯಾಗಿದೆ.
ಐದು ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಸ್ಥಳೀಯ ಇತಿಹಾಸ, ದೇವಾಲಯದ ಬೆಳವಣಿಗೆ ಹಾಗೂ ಅಂದಿನ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳ ಕುರಿತು ಮಹತ್ವದ ಮಾಹಿತಿ ಒದಗಿಸುವ ನಿರೀಕ್ಷೆಯಿದೆ ಎಂದು ಸಂಶೋಧಕ ಡಾ. ಮಹೇಶ್ ಕುಂಚಿಗನಾಳ್ ತಿಳಿಸಿದ್ದಾರೆ.
ಖ್ಯಾತ ಸಂಶೋಧಕ ಡಾ. ಲಕ್ಷ್ಮಣ್ ತೆಲಗಾವಿ ಅವರ ಸೂಚನೆಯ ಮೇರೆಗೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕ್ಷೇತ್ರಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ. ದೇವಾಲಯದ ಸಮೀಪದಲ್ಲಿರುವ ಆಹೋಬಲ ನರಸಿಂಹ ದೇವಾಲಯದ ಬಳಿ ಪ್ರಬುದ್ಧ ಅವರು ಶಾಸನವನ್ನು ಗಮನಿಸಿ ಡಾ. ಮಹೇಶ್ ಅವರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದ ಅವರು, ಇದು ವಿಜಯನಗರ ಸಾಮ್ರಾಜ್ಯದ ಪತನದ ನಂತರದ ಪಾಳೇಗಾರರ ಕಾಲಕ್ಕೆ ಸೇರಿದ್ದೆಂದು ಗುರುತಿಸಿದ್ದಾರೆ.
ಇದನ್ನೂ ಓದಿ:
ಹೊರಕೇರಿ ರಂಗನಾಥಸ್ವಾಮಿ ದೇವಾಲಯವು ವಿವಿಧ ಅರಸರ ಕಾಲದಲ್ಲಿ ಅಭಿವೃದ್ಧಿಗೊಂಡಿದೆ. ಪಾಳೇಗಾರರ ಆಡಳಿತಕ್ಕೂ ಮುನ್ನವೇ ನಿರ್ಮಾಣವಾಗಿದ್ದ ಈ ದೇವಾಲಯದ ಗರ್ಭಗುಡಿಯ ಮುಂದಿರುವ ಕಂಬಗಳು ಹೊಯ್ಸಳ ಶೈಲಿಯನ್ನು ನೆನಪಿಸುತ್ತವೆ. ದೇವಾಲಯದ ನವರಂಗದ ಕಂಬದಲ್ಲಿರುವ ಕ್ರಿ.ಶ. 1465ರ ಶಾಸನದಲ್ಲಿ ರಂಗನಾಥ ದೇವರನ್ನು ‘ತಿರುವೆಂಗಳನಾಥ’ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು ಕ್ರಿ.ಶ. 1756ರ ಶಾಸನದಲ್ಲಿ ದೇವಾಲಯವನ್ನು ‘ಹೊರಕೆರೆ ರಂಗಧಾಮ’ ಎಂದು ಕರೆಯಲಾಗಿದೆ.
ಗೋವಿಂದನ ಸೇವೆಯ ಉಲ್ಲೇಖ
ಹೊಸದಾಗಿ ಪತ್ತೆಯಾಗಿರುವ ಐದು ಸಾಲಿನ ಶಾಸನದಲ್ಲಿ ನಂದನ ಹೊಸೂರಿನ ಗೋವಿಂದ ಎಂಬ ವ್ಯಕ್ತಿ ದೇವಾಲಯಕ್ಕೆ ಸಲ್ಲಿಸಿದ ಸೇವೆಯ ಕುರಿತು ಉಲ್ಲೇಖವಿದೆ. ಆದರೆ ಶಾಸನದ ಕೆಲವು ಭಾಗಗಳು ಹಾನಿಗೊಳಗಾಗಿರುವುದರಿಂದ ಸೇವೆಯ ಸ್ವರೂಪ ಸ್ಪಷ್ಟವಾಗಿಲ್ಲ. ದೇವಾಲಯದ ಪ್ರಾಕಾರದ ಗೋಡೆಯಲ್ಲಿಯೇ ಶಾಸನ ಇರುವುದರಿಂದ ಗೋವಿಂದನೇ ಪ್ರಾಕಾರದ ಗೋಡೆಯನ್ನು ನಿರ್ಮಿಸಿರಬಹುದು ಎಂಬುದು ಡಾ. ಮಹೇಶ್ ಅವರ ಅಭಿಪ್ರಾಯ.
ಶಾಸನದಲ್ಲಿ ಉಲ್ಲೇಖವಾಗಿರುವ ಪ್ರಮತಿ ಸಂವತ್ಸರದ ಆಧಾರದಲ್ಲಿ ಇದು ಕ್ರಿ.ಶ. 1639 ಅಥವಾ 1693ರ ಅವಧಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳೀಯ ಜನಪದ ಐತಿಹ್ಯಗಳಲ್ಲಿ ನಂದನ ಹೊಸೂರಿನೊಂದಿಗೆ ಗುರುತಿಸಿಕೊಂಡಿರುವ ಸಾಂಸ್ಕೃತಿಕ ಸಂಘರ್ಷವನ್ನು ಅರ್ಥೈಸಲು ಈ ಶಾಸನ ಮಹತ್ವದ ಐತಿಹಾಸಿಕ ದಾಖಲೆಯಾಗಲಿದೆ.



