November 18, 2026
Wednesday, November 18, 2026
spot_img

ಅರಶಿಣ ರಫ್ತು ವ್ಯವಹಾರದ ಆಮಿಷ: ಕುಮಟಾದ ವ್ಯಕ್ತಿಗೆ 4.29 ಲಕ್ಷ ರೂ. ವಂಚನೆ

ಹೊಸದಿಗಂತ ವರದಿ ಕಾರವಾರ:

ವೆಬ್‌ಸೈಟ್ ಮೂಲಕ ಅರಶಿಣ ರಫ್ತು ವ್ಯವಹಾರ ಕುದುರಿಸುವ ಆಮಿಷವೊಡ್ಡಿ ಕುಮಟಾದ ವ್ಯಕ್ತಿಯೊಬ್ಬರಿಗೆ 4.29 ಲಕ್ಷ ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕುಮಟಾದ ವನಳ್ಳಿ ನಿವಾಸಿ ನಿತ್ಯಾನಂದ ನಾಯ್ಕ ವಂಚನೆಗೊಳಗಾದ ವ್ಯಕ್ತಿ. ಇವರು ಸೆಪ್ಟೆಂಬರ್ 28ರಂದು ಸಾಂಬಾರು ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕುರಿತು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ‘ವೆಬ್ ಸೊಲ್ಯುಶನ್ಸ್ ಎಕ್ಸ್‌ಪೋರ್ಟ್’ ಎಂಬ ಕಂಪನಿಯ ಮಾಹಿತಿ ದೊರೆತಿದ್ದು, ಅದರ ವೆಬ್‌ಸೈಟ್‌ನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದರು.

ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಕಂಪನಿಯ ಮಾಲೀಕ ಭುವನಚಂದ್ರ ಎಂದು ಪರಿಚಯಿಸಿಕೊಂಡು, ವಿದೇಶಿ ಖರೀದಿದಾರರನ್ನು ಸಂಪರ್ಕಿಸಿ ರಫ್ತುದಾರರಿಗೆ ವ್ಯವಹಾರ ಕುದುರಿಸಿಕೊಡುವುದಾಗಿ ನಂಬಿಸಿದ್ದಾನೆ. ಬಳಿಕ ನಿತ್ಯಾನಂದ ನಾಯ್ಕ ಅವರನ್ನು ಸಂಪರ್ಕಿಸಿ ಗ್ರೀಸ್ ದೇಶದ ‘ಮಗ್ನಾ ಗ್ರೀಸಿಯಾ ಟ್ರೇಡ್ ಎಲ್‌ಎಲ್‌ಸಿ’ ಕಂಪನಿಯ ಮಾಲೀಕನೆಂದು ಪರಿಚಯಿಸಿಕೊಂಡ ವೆಸಲಿಸ್ ಕಾನ್ಸಾಂಟಿಪೋಸ್ ಎಂಬಾತನ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ನೀಡಿದ್ದಾನೆ.

ಇದನ್ನೂ ಓದಿ:

ಈ ವ್ಯಕ್ತಿ ನಿತ್ಯಾನಂದ ನಾಯ್ಕ ಅವರಿಂದ ಸುಮಾರು 98 ಲಕ್ಷ ಮೌಲ್ಯದ 25 ಮೆಟ್ರಿಕ್ ಟನ್ ಅರಶಿಣ ಕೊಂಬುಗಳನ್ನು ಖರೀದಿಸುವುದಾಗಿ ಹೇಳಿದ್ದಾನೆ. ರಫ್ತು ವ್ಯವಹಾರಕ್ಕೆ ಅಗತ್ಯವಿರುವ ಪರವಾನಗಿ ಹಾಗೂ ಪ್ರಮಾಣಪತ್ರಗಳನ್ನು ಪಡೆಯಲು ಮುಂಗಡ ಹಣ ಪಾವತಿಸಬೇಕೆಂದು ನಂಬಿಸಿದ್ದಾನೆ.

ಇದನ್ನು ನಂಬಿದ ನಿತ್ಯಾನಂದ ನಾಯ್ಕ ಅಕ್ಟೋಬರ್ 6ರಿಂದ 21ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 4.29 ಲಕ್ಷ ಹಣ ವರ್ಗಾಯಿಸಿದ್ದಾರೆ. ಬಳಿಕ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Must Read