November 18, 2026
Wednesday, November 18, 2026
spot_img

ಉಗ್ರರ ದಾಳಿಯ ಭೀತಿ: ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗೆ ಹೊಸ ಭದ್ರತಾ ಮಾರ್ಗಸೂಚಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ ಸಿಬ್ಬಂದಿಯ ಸುರಕ್ಷತೆಗಾಗಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಬುಲೆಟ್‌ಪ್ರೂಫ್ ಜಾಕೆಟ್ ಕಡ್ಡಾಯ

ಕರ್ತವ್ಯದಲ್ಲಿರುವ ಸಿಬ್ಬಂದಿ ಬುಲೆಟ್‌ಪ್ರೂಫ್ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದರ ಜತೆಗೆ, ಚೆಕ್‌ಪೋಸ್ಟ್‌ಗಳಲ್ಲಿ ಸುರಕ್ಷಿತ ಬಂಕರ್‌ಗಳನ್ನು ನಿರ್ಮಿಸಿ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಬಲಪಡಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:

ಚೆಕ್‌ಪೋಸ್ಟ್ ದಾಳಿಯ ಬೆನ್ನಲ್ಲೇ ಈ ಕ್ರಮ

ನವೆಂಬರ್ 11ರಂದು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ಘಟನೆ ಭದ್ರತಾ ಪಡೆಗಳ ಸ್ಥಿರ ನಿಯೋಜನಾ ಸ್ಥಳಗಳಲ್ಲಿನ ಅಪಾಯಗಳನ್ನು ಎತ್ತಿ ತೋರಿಸಿದ್ದು, ಇದರ ಬೆನ್ನಲ್ಲೇ ಹೊಸ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ.

ಹೊಸ ಬಂಕರ್ ನಿರ್ಮಿಸಲು ವ್ಯವಸ್ಥೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಸುಮಾರು 80 ಬೆಟಾಲಿಯನ್‌ಗಳನ್ನು ನಿಯೋಜಿಸಿದೆ. ಕೇಂದ್ರಾಡಳಿತ ಪ್ರದೇಶದಾದ್ಯಂತ ಹಗಲು-ರಾತ್ರಿ ಕಾರ್ಯನಿರ್ವಹಿಸುವ ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಬಂಕರ್‌ಗಳಿಲ್ಲದ ಸ್ಥಳಗಳಲ್ಲಿ ಹೊಸದಾಗಿ ನಿರ್ಮಿಸುವುದು ಹಾಗೂ ಈಗಾಗಲೇ ಇರುವ ಬಂಕರ್‌ಗಳನ್ನು ಬಲಪಡಿಸುವಂತೆ ನಿರ್ದೇಶಿಸಲಾಗಿದೆ.

ನಿಯೋಜನಾ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ, ಕಣ್ಗಾವಲು ಹಾಗೂ ಪರಿಣಾಮಕಾರಿ ಸಂವಹನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಕರ್ತವ್ಯದ ವೇಳೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ನಿರಂತರ ಎಚ್ಚರಿಕೆ ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ.

ಭದ್ರತಾ ಕ್ರಮಗಳ ಅನುಷ್ಠಾನದ ಹೊಣೆಯನ್ನು ಘಟಕದ ಕಮಾಂಡರ್‌ಗಳು ಹಾಗೂ ಕಂಪನಿ ಕಮಾಂಡರ್‌ಗಳಿಗೆ ವಹಿಸಲಾಗಿದೆ. ಅವರು ಖುದ್ದಾಗಿ ಪರಿಶೀಲನೆ ನಡೆಸಿ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ. ಉಗ್ರರ ದಾಳಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆಯೂ ಸಿಬ್ಬಂದಿಗೆ ಮಾಹಿತಿ ನೀಡಬೇಕು.

ಭದ್ರತಾ ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಉಗ್ರರ ದಾಳಿಯನ್ನು ಎದುರಿಸುವುದರ ಜತೆಗೆ, ಮುಂಚಿತ ಸುರಕ್ಷತಾ ಕ್ರಮಗಳ ಮೂಲಕ ಸಿಬ್ಬಂದಿಯ ಜೀವ ರಕ್ಷಿಸುವುದು ಪಡೆಗಳ ಆದ್ಯತೆಯಾಗಿದೆ.

Must Read

Skip to toolbar