ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ತಾರಾ ದಂಪತಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ದಾಂಪತ್ಯ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ನಟಿ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಅತ್ಯಂತ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. 2022ರಲ್ಲಿ ಸರಳವಾಗಿ ವಿವಾಹವಾದ ಈ ಜೋಡಿಯ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುವ ನೆಟ್ಟಿಗರು, ಇವರ ಸಂಬಂಧದಲ್ಲಿ ಸಮಾನತೆಯಿಲ್ಲ ಮತ್ತು ಆಲಿಯಾ ಈ ಮದುವೆಯಲ್ಲಿ ನೊಂದಿದ್ದಾರೆ ಎಂಬ ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದ್ದರು. ಇದೀಗ ಪ್ರತಿಷ್ಠಿತ ‘ಟೈಮ್’ ನಿಯತಕಾಲಿಕೆಯ ‘ಟೈಮ್ 100 ನೆಕ್ಸ್ಟ್ ಇಂಡಿಯಾ’ ಸಂದರ್ಶನದಲ್ಲಿ ಮಾತನಾಡಿರುವ ಆಲಿಯಾ, ಈ ಎಲ್ಲಾ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ.
ತಮ್ಮ ದಾಂಪತ್ಯದ ಬಗ್ಗೆ ಅಪರಿಚಿತರು ನೀಡುವ ತೀರ್ಪುಗಳ ಕುರಿತು ಆಲಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮಹಿಳೆಯರು ತಮ್ಮ ಮನಸ್ಸು ಮತ್ತು ಹೃದಯದ ಮಾತನ್ನು ಕೇಳಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ಸದಾ ಪ್ರತಿಪಾದಿಸುತ್ತೇನೆ. ಹಾಗಿರುವಾಗ, ಯಾರೋ ಕಲ್ಪಿಸಿಕೊಂಡ ಕಥೆಗಳಿಗೆ ನನ್ನನ್ನು ಬಲಿಪಶು ಅಥವಾ ಅಸಹಾಯಕಿ ಎಂಬಂತೆ ಬಿಂಬಿಸುವುದು ನನಗೆ ಮಾಡುವ ದೊಡ್ಡ ಅವಮಾನ” ಎಂದು ಅವರು ನೇರವಾಗಿ ಹೇಳಿದ್ದಾರೆ.
ಜನರು ತಮ್ಮ ಸಂಬಂಧವನ್ನು ಏಕೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂಬುದಕ್ಕೂ ಆಲಿಯಾ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ಸಂಬಂಧವು ಸಮಾಜದ ಹಳೆಯ ಅಥವಾ ಸಾಂಪ್ರದಾಯಿಕ ಮದುವೆಯ ಕಲ್ಪನೆಗಳಿಗೆ ಹೊಂದಿಕೆಯಾಗುವುದಿಲ್ಲ. ಬಹುಶಃ ಇದೇ ಕಾರಣಕ್ಕೆ ಜನರು ಇಂತಹ ಕಾಮೆಂಟ್ಗಳನ್ನು ಮಾಡುತ್ತಿರಬಹುದು. ಆದರೆ ಬೇರೆಯವರ ನಿರೀಕ್ಷೆಗೆ ತಕ್ಕಂತೆ ನಾವು ಬದುಕಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತಿ ರಣಬೀರ್ ಕಪೂರ್ ಅವರೊಂದಿಗಿನ ತಮ್ಮ ಬಾಂಧವ್ಯದ ಆಳವನ್ನು ಆಲಿಯಾ ಭಾವುಕವಾಗಿ ವಿವರಿಸಿದ್ದಾರೆ. “ಯಾವುದೇ ಕೃತಕ ಪ್ರಯತ್ನವಿಲ್ಲದೆ ಸಂಗಾತಿ ನಮ್ಮನ್ನು ಗುರುತಿಸುವುದು ಮತ್ತು ನಾವು ಏನನ್ನೂ ಹೇಳದಿದ್ದರೂ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದೇ ಯಾವುದೇ ಸಂಬಂಧದ ನಿಜವಾದ ಅಡಿಪಾಯ. ನನ್ನ ಪಾಲಿಗೆ ರಣಬೀರ್ ಅಂತಹ ಸಂಗಾತಿ. ಇದೇ ನಮ್ಮ ಜೀವನದ ವಾಸ್ತವ” ಎನ್ನುವ ಮೂಲಕ, ತಮ್ಮ ದಾಂಪತ್ಯ ಸುಖಮಯವಾಗಿದೆ ಎಂಬ ಸಂದೇಶವನ್ನು ಟೀಕಾಕಾರರಿಗೆ ರವಾನಿಸಿದ್ದಾರೆ.



