November 19, 2026
Thursday, November 19, 2026
spot_img

ರಾಜಧಾನಿ ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆಗೆ ಸಕಲ ಸಿದ್ಧತೆ: 3 ಲಕ್ಷ ಪೇಪರ್ ಬ್ಯಾಗ್ ಬಳಸಲು ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಡಿ. ಐದರಿಂದ ಎಂಟರವರೆಗೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಅದ್ಧೂರಿಯಾದ ಪರಿಷೆ ನಡೆಯಲಿದ್ದು, ಈ ಬಾರಿ ರಾಜ್ಯದ ಹಲವು ಜಿಲ್ಲೆಗಳ ರೈತರು, ವ್ಯಾಪಾರಿಗಳು ಭಾಗಿಯಾಗುವ ನಿರೀಕ್ಷೆ ಇದೆ.

ಡಿ. ಏಳರಂದು ಮುಖ್ಯ ಪರಿಷೆ ನಡೆಯಲಿದೆ. ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಹಾಗೂ ದೊಡ್ಡ ಗಣಪತಿ ದೇವಸ್ಥಾನದ ಸುತ್ತಮುತ್ತ ಕಡಲೆಕಾಯಿ ರಾಶಿಗಳು ಕಾಣಿಸಲಿವೆ. ಈ ಪಾರಿ ಪರಿಸರ ಹಾಳಾಗದಂತೆ ಪೇಪರ್‌ ಬ್ಯಾಗ್‌ಗಳನ್ನು ಬಳಕೆ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ. ರೈತರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪರಿಷೆಯ ಸಿದ್ಧತೆ ನಡೆಸಲು ಮುಜರಾಯಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿವೆ.

ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಮಂಡ್ಯ, ಮಾಗಡಿ, ಮೈಸೂರು, ಕುಣಿಗಲ್ ಮತ್ತು ತುಮಕೂರು ಭಾಗಗಳಿಂದ ಕಡಲೆಕಾಯಿ ಬೆಂಗಳೂರಿಗೆ ಬರಲಿದೆ. ಅಷ್ಟೇ ಅಲ್ಲದೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದ ವ್ಯಾಪಾರಿಗಳೂ ಕಡಲೆಕಾಯಿ ಮಾರಾಟಕ್ಕೆ ಆಗಮಿಸಲಿದ್ದಾರೆ. ಇದರಿಂದ ವಿವಿಧ ಭಾಗಗಳ ಕಡಲೆಕಾಯಿ ತಳಿಗಳು ಒಂದೇ ಸ್ಥಳದಲ್ಲಿ ಗ್ರಾಹಕರಿಗೆ ಸಿಗಲಿವೆ. ಪರಿಷೆಯಲ್ಲಿ ಬೇಯಿಸಿದ ಕಡಲೆ, ಹುರಿದ ಕಡಲೆಕಾಯಿ, ಬಗೆಬಗೆಯ ಹಸಿ ಕಡಲೆಕಾಯಿಗಳ ರಾಶಿಗಳು ಕಾಣಿಸಲಿವೆ. ಜೊತೆಗೆ ಮಂಡಕ್ಕಿ, ಖಾರ, ಬೆಂಡು, ಬತ್ತಾಸು, ಸಿಹಿ ತಿಂಡಿಗಳು, ಬಜ್ಜಿ ಬೋಂಡಾ, ಆಟಿಕೆಗಳು, ಬಳೆ ಸರ ಇನ್ನಿತರ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಇರಲಿವೆ.

ಈ ಬಾರಿಯ ಕಡಲೆಕಾಯಿ ಪರಿಷೆಯಲ್ಲಿ ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆಯನ್ನು ಕಡಿಮೆ ಮಾಡಲು ನಾಗರಿಕ ಸಂಘಟನೆಗಳು ಮತ್ತು ಸ್ವಯಂಸೇವಕರು ಕೈಜೋಡಿಸಿದ್ದಾರೆ. ಹಳೆಯ ಕಂದು ಬಣ್ಣದ ಕಾಗದದ ಚೀಲಗಳನ್ನು ಸಂಗ್ರಹಿಸುವುದು, ಹಳೆಯ ದಿನಪತ್ರಿಕೆಗಳಿಂದ ಪೇಪರ್ ಬ್ಯಾಗ್‌ಗಳನ್ನು ಸಿದ್ಧಪಡಿಸುವುದು ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಈ ಬಾರಿಯ ಪರಿಷೆಗಾಗಿ ಒಟ್ಟಾರೆ ಮೂರು ಲಕ್ಷ ಪೇಪರ್‌ ಬ್ಯಾಗ್‌ಗಳನ್ನು ಸಿದ್ಧಪಡಿಸುವ ಗುರಿ ಇದೆ. ಇದರ ಜೊತೆಗೆ ಪರಿಷಗೆ ಬರುವ ಜನರು ತಮ್ಮ ಮನೆಯಿಂದಲೇ ಬಟ್ಟೆಯ ಅಥವಾ ಪೇಪರ್‌ ಬ್ಯಾಗ್‌ಗಳನ್ನು ತರುವುದು ಉತ್ತಮವಾಗಿದೆ.

Must Read