ಪ್ರತಿ ಮನೆಯ ಅಂಗಳದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಳಸಿ ಗಿಡಕ್ಕೆ ಸಂಜೆ ಹೊತ್ತು ನೀರು ಹಾಕಬಾರದು ಎಂಬ ನಂಬಿಕೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಈ ಮಾತಿನ ಹಿಂದೆ ಧಾರ್ಮಿಕ ಶ್ರದ್ಧೆಯ ಜೊತೆಗೆ ಸರಳ ವಿಜ್ಞಾನದ ಕಾರಣವೂ ಅಡಗಿದೆ.
ಧಾರ್ಮಿಕ ನಂಬಿಕೆ ಏನು?
ಸಂಜೆ ಹೊತ್ತು ತುಳಸಿ ದೇವಿ ವಿಶ್ರಾಂತಿ ಪಡೆಯುವ ಸಮಯ ಎಂಬ ನಂಬಿಕೆ ಇದೆ. ಈ ವೇಳೆ ನೀರು ಹಾಕುವುದು ದೇವಿಗೆ ತೊಂದರೆ ಕೊಟ್ಟಂತೆ ಎಂಬ ಭಾವನೆ ಹಿರಿಯರಲ್ಲಿದೆ. ಆದ್ದರಿಂದ ಸಂಜೆ ಹೊತ್ತು ನೀರು ಹಾಕುವ ಬದಲು ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚಿ ನಮಸ್ಕರಿಸುವ ಸಂಪ್ರದಾಯ ರೂಢಿಯಲ್ಲಿದೆ.
ವೈಜ್ಞಾನಿಕ ಕಾರಣವೇನು?
ಸೂರ್ಯ ಮುಳುಗಿದ ನಂತರ ವಾತಾವರಣದಲ್ಲಿ ತಾಪಮಾನ ಕಡಿಮೆಯಾಗುತ್ತದೆ. ಸೂರ್ಯನ ಶಾಖ ಇಲ್ಲದ ಕಾರಣ ಮಣ್ಣಿನಲ್ಲಿರುವ ನೀರು ಬೇಗನೆ ಆವಿಯಾಗುವುದಿಲ್ಲ. ಸಂಜೆ ಅಥವಾ ರಾತ್ರಿ ಹೊತ್ತು ತುಳಸಿ ಗಿಡದ ಬೇರಿಗೆ ಹೆಚ್ಚು ನೀರು ಹಾಕಿದರೆ, ಮಣ್ಣು ದೀರ್ಘಕಾಲ ತೇವವಾಗಿರುತ್ತದೆ. ಇದರಿಂದ ಬೇರುಗಳಿಗೆ ಸರಿಯಾದ ಗಾಳಿ ಸಿಗದೆ ಕೊಳೆಯುವ ಅಪಾಯ ಇರುತ್ತದೆ. ಶಿಲೀಂಧ್ರ ಅಥವಾ ಫಂಗಸ್ ಬೆಳೆದು ಗಿಡ ಸೊರಗಬಹುದು.
ಹಗಲಿನಲ್ಲಿ ಸೂರ್ಯನ ಬೆಳಕಿನ ಸಹಾಯದಿಂದ ಸಸ್ಯಗಳು ಆಹಾರ ತಯಾರಿಸುತ್ತವೆ ಮತ್ತು ನೀರನ್ನು ಸಮರ್ಥವಾಗಿ ಹೀರಿಕೊಳ್ಳುತ್ತವೆ. ಸಂಜೆಯ ನಂತರ ಗಿಡಗಳ ಚಟುವಟಿಕೆ ನಿಧಾನವಾಗುತ್ತದೆ. ಹಾಗಾಗಿ ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ತುಳಸಿ ಗಿಡಕ್ಕೆ ನೀರು ಹಾಕುವುದು ಗಿಡದ ಆರೋಗ್ಯಕ್ಕೆ ಹೆಚ್ಚು ಸೂಕ್ತ.
ನಮ್ಮ ಹಿರಿಯರು ಯಾವುದೇ ಕಾರಣವಿಲ್ಲದೆ ನಿಯಮಗಳನ್ನು ಹೇಳಿಲ್ಲ. ಗಿಡವನ್ನು ರಕ್ಷಿಸುವ ಉದ್ದೇಶದಿಂದಲೇ ಧಾರ್ಮಿಕ ರೂಪ ನೀಡಿ ನಮ್ಮಲ್ಲಿ ಉಳಿಸಿದ್ದಾರೆ. ನಂಬಿಕೆ ಮತ್ತು ವಿಜ್ಞಾನ ಎರಡನ್ನೂ ಸರಿಯಾಗಿ ಅರ್ಥಮಾಡಿಕೊಂಡರೆ, ಮನೆಯ ತುಳಸಿ ಗಿಡ ಯಾವಾಗಲೂ ಹಚ್ಚಹಸಿರಾಗಿ ನಳನಳಿಸುತ್ತದೆ.



