ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಸುಮ್ಮನೆ ಪುಸ್ತಕ ಬರೆಯಬೇಕು ಎಂದು ಬರೆದಿಲ್ಲ. ಪ್ರತೀ ವಾಕ್ಯಕ್ಕೂ ವೈಜ್ಞಾನಿಕ ಮತ್ತು ಐತಿಹಾಸಿಕ ಸಾಕ್ಷಿಯಿದೆ. ಯಾವುದೇ ರೀತಿಯ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅಮೆರಕದ ಶಿಕಾಗೋದಲ್ಲಿರುವ ಲೇಖಕ ರವಿ ಹಂಜ್ ಹೇಳಿದ್ದಾರೆ.
ಬಸವಣ್ಣನವರ ಕುರಿತು ರವಿ ಹಂಜ್ ಬರೆದಿರುವ ಬಸವ ಮಂಟಪ ಕೃತಿ ಹಾಗೂ ಅವರು ನೀಡಿರುವ ಕೆಲ ಸಂದರ್ಶನಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ಲಿಂಗಾಯತ ಸಮುದಾಯ ಈ ಪುಸ್ತಕವನ್ನು ವಿರೋಧಿಸಿ, ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ರವಿ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಒಂದೂವರೆ ಗಂಟೆಯಷ್ಟು ಉದ್ದದ ಸಂದರ್ಶನ ನೀಡಿದ್ದೇನೆ. ಅದರಲ್ಲಿರುವ ಒಂದೆರಡು ನಿಮಿಷದ ಭಾಗವನ್ನು ಮಾತ್ರ ಕಟ್ ಮಾಡಿಸಿಕೊಂಡು ಬಸವಣ್ಣನವರನ್ನು ನಾನು ಕಳ್ಳ ಅಥವಾ ಕೊಲೆಗಡುಕ ಎಂದು ಹೇಳಿದ್ದೇನೆ ಎನ್ನುವ ರೀತಿ ಎಡಿಟ್ ಮಾಡಲಾಗಿದೆ. ನಾನು ಆ ರೀತಿ ಅಥವಾ ಆ ಅರ್ಥ ಬರುವ ರೀತಿ ಮಾತನಾಡಿಲ್ಲ.
ಬಸವಣ್ಣನವರು ಬಿಜ್ಜಳನ ಖಜಾನೆಯನ್ನು ದೋಚಿದರು ಮತ್ತು ಬಿಜ್ಜಳನ ಹತ್ಯೆಗೆ ಕಾರಣರಾದರು ಎಂಬುದು ತಮ್ಮ ಸ್ವಂತ ಮಾತಲ್ಲ. 12ನೇ–13ನೇ ಶತಮಾನದ ಪ್ರಮುಖ ವೀರಶೈವ ಕವಿ ಪಾಲ್ಕುರಿಕೆ ಸೋಮನಾಥನ ‘ಬಸವ ಪುರಾಣ’, ಹರಿಹರನ ‘ಬಸವರಾಜ ದೇವರ ರಗಳೆ’, ಜೈನ ಪುರಾಣಗಳು ಹಾಗೂ ಬಿ.ಎಲ್. ರೈಸ್ ಅವರ ‘ಮೈಸೂರು ಗೆಜೆಟಿಯರ್’ ಮತ್ತು ‘ಬಾಂಬೆ ಗೆಜೆಟಿಯರ್’ನಂತಹ ಐತಿಹಾಸಿಕ ಗ್ರಂಥಗಳಲ್ಲಿಯೇ ಈ ಉಲ್ಲೇಖಗಳಿವೆ. ಈ ಗ್ರಂಥಗಳನ್ನು ನಂಬುವುದಿಲ್ಲ ಎಂದಾದರೆ ಬಸವಣ್ಣನವರ ಇತಿಹಾಸವೇ ಶೂನ್ಯವಾಗುತ್ತದೆ.
ವಚನಗಳಲ್ಲಿ ಪರಸ್ಪರ ವೈರುಧ್ಯ ಮತ್ತು ದ್ವಂದ್ವಗಳಿವೆ. ಅವು ಕೇವಲ ಸಾಂದರ್ಭಿಕ ಸನ್ನಿವೇಶಗಳಲ್ಲಿ ಹೇಳಿದ ಮಾತುಗಳು ಹಾಗೂ ಚರ್ಚಾಗೋಷ್ಠಿಯ ದಾಖಲಾತಿಗಳೇ ಹೊರತು ಧರ್ಮ ಗ್ರಂಥಗಳಾಗಲು ಯೋಗ್ಯವಲ್ಲ. ಬದಲಾಗಿ ಕರಣಹಸುಗೆ, ಮಂತ್ರಗೋಪ್ಯ, ಸಿದ್ಧಾಂತ ಶಿಖಾಮಣಿ, ಶಕ್ತಿ ವಿಶಿಷ್ಟಾದ್ವೈತ ಮತ್ತು ಅಕ್ಕಮಹಾದೇವಿಯ ಸೃಷ್ಟಿ ವಚನಗಳುಈ ಐದು ಗ್ರಂಥಗಳು ವೀರಶೈವ ಲಿಂಗಾಯತ ಧರ್ಮ ಗ್ರಂಥಗಳಾಗಲು ಅರ್ಹವಾಗಿವೆ ಎಂದಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಅವರು ಪೂರ್ಣ ವಿಡಿಯೋ ನೋಡಿಲ್ಲ. ಜೆ.ಎಸ್. ಪಾಟೀಲ್ ಮತ್ತು ಎಸ್.ಎಂ ಜಾಮದಾರ್ ಅವರ ಮಾತನ್ನು ಕೇಳಿ ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಅಖಂಡ ವೀರಶೈವ ಲಿಂಗಾಯತ ಒಂದೇ ಎಂದು ನಂಬುವ ಮುಗ್ಧ ಬಸವ ಭಕ್ತರ ಭಾವನೆಗಳಿಗೆ ನೋವಾಗಿದ್ದರೆ ಅದಕ್ಕಾಗಿ ನೈತಿಕ ಹೊಣೆ ಹೊತ್ತು ವಿಷಾದ ಮತ್ತು ಕ್ಷಮೆ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.



