ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರದಿಂದ ಸಾಕಷ್ಟು ತೆರಿಗೆ ವಿನಾಯಿತಿ ಮತ್ತು ಉದ್ಯಮ ಸ್ನೇಹಿ ಸೌಲಭ್ಯಗಳನ್ನು ಪಡೆದ ನಂತರವೂ, ಉದ್ಯೋಗ ಸೃಷ್ಟಿ ಮತ್ತು ನೌಕರರ ವೇತನ ಹೆಚ್ಚಳದ ವಿಚಾರದಲ್ಲಿ ಹಿಂದೇಟು ಹಾಕುತ್ತಿರುವ ಭಾರತದ ಕಾರ್ಪೊರೇಟ್ ವಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಪ್ರಶ್ನೆ ಕೇಳಿದ್ದಾರೆ.
ದೆಹಲಿಯ ‘ಭಾರತ್ ಮಂಟಪಂ’ನಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ಶತಮಾನೋತ್ಸವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿರುವಾಗ ಉದ್ಯಮ ವಲಯ ದೇಶಕ್ಕೆ ಏನು ಕೊಡುಗೆ ನೀಡುತ್ತಿದೆ ಎಂದು ಪ್ರಶ್ನಿಸಿದರು. ಬೃಹತ್ ಕಾರ್ಪೊರೇಟ್ ಕಂಪನಿಗಳ ಹಸಿವಿಗೆ ಕೊನೆಯೇ ಇಲ್ಲ, ಅವರಿಗೆ ಎಷ್ಟೇ ಸಿಕ್ಕರೂ ಇನ್ನೂ ಬೇಕು ಎನ್ನುವ ಮನಸ್ಥಿತಿಯಿದೆ ಎಂದು ಮೋದಿ ಚಾಟಿ ಬೀಸಿದರು.
ತೆರಿಗೆ ಕಡಿತದ ಲಾಭ ನೌಕರರಿಗೆ ತಲುಪಿದೆಯೇ?
ದೇಶದಲ್ಲಿ ವ್ಯಾಪಾರ-ವಹಿವಾಟು ಸುಲಭಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಪ್ರಧಾನಿ, “2014ರಲ್ಲಿ ಶೇ. 30ರಷ್ಟಿದ್ದ ಮೂಲ ಕಾರ್ಪೊರೇಟ್ ತೆರಿಗೆಯನ್ನು ನಾವು ಶೇ. 22ಕ್ಕೆ ಇಳಿಸಿದ್ದೇವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗಲಿ ಎಂಬ ಉದ್ದೇಶದಿಂದ ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದೇವೆ. ಆದರೆ, ನೀವು ನಿಮ್ಮ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಿದ್ದೀರಾ? ಹೊಸದಾಗಿ ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದೀರಾ? ಇಲ್ಲ.. ‘ಮೋದಿಜಿ ನೀವೇ ಎಲ್ಲವನ್ನೂ ಮಾಡಿ, ನಾವು ಆಮೇಲೆ ನೋಡೋಣ’ ಎಂಬ ಧೋರಣೆಯಲ್ಲೇ ನೀವಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದೆಡೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದ್ದು, ನೌಕರರಲ್ಲಿ ಅಭದ್ರತೆ ಕಾಡುತ್ತಿರುವ ಹೊತ್ತಿನಲ್ಲೇ ಪ್ರಧಾನಿಯವರ ಈ ಮಾತುಗಳು ಮಹತ್ವ ಪಡೆದುಕೊಂಡಿವೆ.
ತೆರಿಗೆ ಸುಧಾರಣೆ ಮತ್ತು ತೆರಿಗೆದಾರರಿಗೆ ಗೌರವ
ತೆರಿಗೆ ವ್ಯವಸ್ಥೆಯಲ್ಲಿ ತಂದಿರುವ ಸುಧಾರಣೆಗಳ ಬಗ್ಗೆ ಮಾತನಾಡಿದ ಮೋದಿ, “ಹಿಂದೆಲ್ಲಾ ಆದಾಯ ತೆರಿಗೆ ರೀಫಂಡ್ ಬರಲು ಎಂಟು ತಿಂಗಳು ಕಾಯಬೇಕಿತ್ತು. ಆದರೆ ಇಂದು ಕೇವಲ ಒಂದು ವಾರದೊಳಗೆ ರೀಫಂಡ್ ಹಣ ಖಾತೆಗೆ ಬರುತ್ತಿದೆ. ಜಿಎಸ್ಟಿ ಸುಧಾರಣೆಯಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗಿ ಬೇಡಿಕೆ ಹೆಚ್ಚಿದೆ, ಇದರ ನೇರ ಲಾಭ ಉದ್ಯಮಗಳಿಗೇ ಆಗಿದೆ” ಎಂದರು.
2001-02ರಲ್ಲಿ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಆಡಿದ್ದ ಮಾತನ್ನು ನೆನಪಿಸಿಕೊಂಡ ಮೋದಿ, “ಪ್ರತಿಯೊಬ್ಬ ತೆರಿಗೆದಾರರನ್ನೂ ಕಳ್ಳರಂತೆ ಅನುಮಾನದಿಂದ ನೋಡುವುದನ್ನು ಯಾವಾಗ ನಿಲ್ಲಿಸುತ್ತೀರಿ ಎಂದು ನಾನು ಅಂದು ಅಧಿಕಾರಿಗಳನ್ನು ಕೇಳಿದ್ದೆ. ರೈತರು, ಸಣ್ಣ ಉದ್ಯಮಿಗಳು, ಕೈಗಾರಿಕೆಗಳು, ಸಂಪತ್ತು ಸೃಷ್ಟಿಸುವವರು ಮತ್ತು ತೆರಿಗೆದಾರರನ್ನು ಗೌರವಿಸದೆ ಯಾವುದೇ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಮುಂದುರೆದು, ಕೇವಲ ದೇಶೀಯ ಮಾರುಕಟ್ಟೆಯನ್ನೇ ನೆಚ್ಚಿಕೊಂಡು ಕೂರದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಕಂಪನಿಗಳು ಸಜ್ಜಾಗಬೇಕು ಎಂದು ಕರೆ ನೀಡಿದ ಪ್ರಧಾನಿ, “ಮುಂದಿನ 20 ವರ್ಷಗಳ ಕಾಲ ನೀವು ಮಾಡುವ ಪ್ರತಿಯೊಂದು ದೀರ್ಘಕಾಲೀನ ಹೂಡಿಕೆಯ ನಿರ್ಧಾರದಲ್ಲೂ ‘ಭಾರತ ಮೊದಲು’ ಎಂಬುದೇ ನಿಮ್ಮ ಅಡಿಪಾಯವಾಗಿರಲಿ. ಭಾರತದ ಬೆಳವಣಿಗೆಯ ಕಥೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ, ನಮ್ಮ ಉದ್ಯಮಗಳು ಅವುಗಳನ್ನು ಬಾಚಿಕೊಳ್ಳಲು ಸಿದ್ಧವಿರಬೇಕು” ಎಂದು ಕಿವಿಮಾತು ಹೇಳಿದರು.



