November 20, 2026
Friday, November 20, 2026
spot_img

ಖಳನಾಯಕ ಹೀರೋ ಆದ್ರೆ ಹೇಗೆ? ‘ರಾಮಾಯಣ’ ಚಿತ್ರದ ವಿರುದ್ಧ ‘ಕೃಷ್ಣ’ನ ತೀಕ್ಷ್ಣ ಪ್ರಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಚಿತ್ರವು ತೆರೆಕಂಡ ಕಡೆಯಲ್ಲೆಲ್ಲಾ ಹಣದ ಹೊಳೆಯನ್ನೇ ಹರಿಸುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿರುವ ಹೊತ್ತಿನಲ್ಲೇ, ಚಿತ್ರದ ಸುತ್ತ ವಿವಾದದ ಬಿಸಿ ಏರಿದೆ. ಇತ್ತೀಚೆಗಷ್ಟೆ ಹಿಂದೂ ಸಂಘಟನೆಯೊಂದು ಬಹಿಷ್ಕಾರದ ಕೂಗು ಎಬ್ಬಿಸಿತ್ತು. ಇದರ ಬೆನ್ನಲ್ಲೇ, ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಶ್ರೀಕೃಷ್ಣನಾಗಿ ಮನೆಮಾತಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಂಸದ ನಿತೀಶ್ ಭಾರದ್ವಾಜ್ ಸಿನಿಮಾದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಿತೀಶ್ ಭಾರದ್ವಾಜ್, ತಾವು ಹಿಂದೆ ನೀಡಿದ್ದ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಚಿತ್ರದ ಟ್ರೈಲರ್ ನೋಡಿ ಇದು ಆಸ್ಕರ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದ ಅವರು, ಪೂರ್ತಿ ಸಿನಿಮಾ ನೋಡಿದ ನಂತರ ತಮ್ಮ ನಿಲುವು ಬದಲಿಸಿದ್ದಾರೆ. ಈ ಚಿತ್ರದಲ್ಲಿ ನಿರ್ದಿಷ್ಟ ಕಮ್ಯುನಿಸ್ಟ್ ಅಜೆಂಡಾ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶ್ರೀರಾಮನ ಪಾತ್ರವನ್ನು ಸಾಮಾನ್ಯ ಮನುಷ್ಯನಂತೆ, ಭಾವನೆಗಳಿಲ್ಲದ ಮುಖದೊಂದಿಗೆ ತೋರಿಸಲಾಗಿದೆ ಎಂದು ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ಬಿಡುವಾಗ ರಾಮ ಅಳುವುದು ಸಲ್ಲದು. ಪ್ರಾಣ ಹೋದರೂ ಕೊಟ್ಟ ಮಾತು ತಪ್ಪದ ಆದರ್ಶವೇ ರಾಮನ ಜೀವಾಳ ಎಂದು ಅವರು ಪ್ರತಿಪಾದಿಸಿದ್ದಾರೆ.

ಇನ್ನು ಯಶ್ ನಟಿಸಿರುವ ರಾವಣನ ಪಾತ್ರದ ಬಗ್ಗೆಯೂ ಅವರು ಕಟುವಾಗಿ ಟೀಕಿಸಿದ್ದಾರೆ. ರಾವಣನ ದುರ್ಗುಣಗಳನ್ನು ಮರೆಮಾಚಿ, ಆತನನ್ನು ನಾಯಕನಂತೆ ಬಿಂಬಿಸಲಾಗಿದೆ ಎಂದು ದೂರಿದ್ದಾರೆ. ರಾವಣನೇ ಒಳ್ಳೆಯವನಾಗಿದ್ದರೆ ವಿಷ್ಣುವಿನ ಅವತಾರ ಏಕೆ ಬೇಕಿತ್ತು? ಮುಂದಿನ ಎರಡು ವರ್ಷ ಯುವಜನತೆ ರಾವಣನನ್ನು “ಕೂಲ್ ಡ್ಯೂಡ್” ಎಂದು ಮೆಚ್ಚಿಕೊಂಡರೆ, ಭಾಗ 2ರಲ್ಲಿ ಅವನ ಸಂಹಾರವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಖಳನಾಯಕನನ್ನು ನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಅರಣ್ಯಕಾಂಡ ಮತ್ತು ಯುದ್ಧಕಾಂಡದ ಹಲವು ಮುಖ್ಯ ಘಟನೆಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿದ ಅವರು, ಚಿತ್ರದ ಬಂಡವಾಳ ಮೂಲದ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಲಕ್ಸೆಂಬರ್ಗ್, ಯುಎಇ ಮತ್ತು ಸಿಂಗಾಪುರದಿಂದ ಬಂದ ಹಣದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇಂತಹ ಅಜೆಂಡಾ ಹೊಂದಿರುವವರನ್ನು “ಹೊಸ ಬ್ರಿಟಿಷರು” ಎಂದು ಕರೆದಿರುವ ಅವರು, ಭಾರತೀಯ ನಾಗರಿಕತೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ.

Must Read

Skip to toolbar