ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಉದ್ಯಮಿ ಕಾವ್ಯಾ ಮಾರನ್ ಅವರು ನವೆಂಬರ್ 11ರಂದು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಥೆನ್ಸ್‌ನ ಪ್ರತಿಷ್ಠಿತ ‘ಫೋರ್ ಸೀಸನ್ಸ್ ಆಸ್ಟಿರ್ ಪ್ಯಾಲೇಸ್’ ಹೊಟೇಲ್ ನಲ್ಲಿ ನಡೆದ ಈ ವಿವಾಹ ಸಮಾರಂಭವು ಅತ್ಯಂತ ಆತ್ಮೀಯವಾಗಿ ಮತ್ತು ವಿಶಿಷ್ಟವಾಗಿ ನೆರವೇರಿದೆ.
ಈ ಜೋಡಿಯು ಸಂಪ್ರದಾಯಬದ್ಧ ಆಡಂಬರಗಳಿಗೆ ಬದಲಾಗಿ ‘ಸ್ವಾಭಿಮಾನಿ ವಿವಾಹ’ ಪದ್ಧತಿಯ ಮೂಲಕ ಒಂದಾಗಿರುವುದು ವಿಶೇಷ. ಎರಡೂ ಕುಟುಂಬಗಳ ಆಪ್ತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿದೆ. ಅನಿರುದ್ಧ್ ಅವರ ಮಾವ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ನವಜೋಡಿ ಹೆಜ್ಜೆ ಹಾಕುವಾಗ ಚಪ್ಪಾಳೆ ತಟ್ಟಿ ಹಾರೈಸುತ್ತಿರುವ ಸುಂದರ ದೃಶ್ಯಗಳು ಅಭಿಮಾನಿಗಳ ಮನಗೆದ್ದಿವೆ.
ಮದುವೆಯಾಗಿ ಒಂದು ವಾರ ಪೂರೈಸಿದ ಹಿನ್ನೆಲೆಯಲ್ಲಿ ಅನಿರುದ್ಧ್ ಅವರು ಗುರುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಮಧುರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಗಮನಸೆಳೆಯುವ ಪ್ರಮುಖ ಅಂಶವೆಂದರೆ, ಅನಿರುದ್ಧ್ ಅವರು ತಮ್ಮ ಮದುವೆಯ ವೇದಿಕೆಯಲ್ಲೇ ಅತಿಥಿಗಳು ಮತ್ತು ಪ್ರೀತಿಯ ಪತ್ನಿ ಕಾವ್ಯಾ ಅವರಿಗಾಗಿ ವಿಶೇಷ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ. ವೇದಿಕೆಯ ಮೇಲೆ ಪತಿ ಅನಿರುದ್ಧ್ ಜೊತೆ ಕಾವ್ಯಾ ಕೂಡ ಹೆಜ್ಜೆ ಹಾಕಿ ಹಾಡಿಗೆ ಧ್ವನಿಯಾಗಿದ್ದಾರೆ.
ಮದುವೆಯ ಆರತಕ್ಷತೆ ಕಾರ್ಯಕ್ರಮವನ್ನು ಗ್ರೀಕ್ ಶೈಲಿಯಲ್ಲಿ ಆಯೋಜಿಸಲಾಗಿದ್ದು, ಅತಿಥಿಗಳೆಲ್ಲರೂ ಬಿಳಿ ಮತ್ತು ಬಂಗಾರದ ಬಣ್ಣದ ಉಡುಪುಗಳಲ್ಲಿ ಮಿಂಚಿದ್ದಾರೆ. ಕಾವ್ಯಾ ಅವರನ್ನು ಹಿಂದಿನಿಂದ ಅಪ್ಪಿಕೊಂಡು ನಗುತ್ತಿರುವ ಫೋಟೋಗೆ “ನನ್ನ ನೆಚ್ಚಿನ ಮ್ಯಾಜಿಕ್” ಎಂದು ಅನಿರುದ್ಧ್ ಬರೆದುಕೊಂಡಿದ್ದಾರೆ. ಅಲ್ಲದೆ, ‘ಎಕ್ಸ್’ ಖಾತೆಯಲ್ಲಿ ತಮ್ಮ 2016ರ ಜನಪ್ರಿಯ ಗೀತೆ ‘ಅವಳುಕ್ಕೇನ’ ಹಾಡಿನ ಹಿನ್ನೆಲೆಯೊಂದಿಗೆ ಮದುವೆಯ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದು, ನವದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



