ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿದ್ದ ಚಿನ್ನದ ಬೆಲೆಯ ಕುಸಿತ ಇಂದೂ ಮುಂದುವರಿದಿದ್ದು, ಒಂದೇ ದಿನ 470 ರೂಪಾಯಿಗಳಷ್ಟು ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿಯ ದರವೂ ಇಳಿಕೆಯ ಹಾದಿಯಲ್ಲಿದೆ. ವಿಶೇಷವೆಂದರೆ, ಚಿನ್ನ ಮತ್ತು ಬೆಳ್ಳಿ ಎರಡೂ ಲೋಹಗಳ ಬೆಲೆಗಳು ಈಗ ಸುಮಾರು ಒಂದು ವರ್ಷದ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಬೆಲೆಗಳು ಹೀಗಿವೆ:
22 ಕ್ಯಾರಟ್ ಚಿನ್ನ: 10 ಗ್ರಾಂ ಚಿನ್ನದ ಬೆಲೆ 1,15,100 ರೂಪಾಯಿ ಆಗಿದೆ.
24 ಕ್ಯಾರಟ್ ಅಪರಂಜಿ ಚಿನ್ನ: 10 ಗ್ರಾಂ ಶುದ್ಧ ಚಿನ್ನದ ಬೆಲೆ 1,25,570 ರೂಪಾಯಿಗೆ ತಲುಪಿದೆ.
ಬೆಳ್ಳಿ ದರ: 100 ಗ್ರಾಂ ಬೆಳ್ಳಿಯ ಬೆಲೆ 17,500 ರೂಪಾಯಿ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ 10 ಗ್ರಾಂಗೆ 1,15,100 ರೂಪಾಯಿ ನಿಗದಿಯಾಗಿದೆ. ಬೆಳ್ಳಿಯ ದರವು 100 ಗ್ರಾಂಗೆ 17,500 ರೂಪಾಯಿಯಲ್ಲಿ ಸ್ಥಿರವಾಗಿದೆ. ಇತ್ತ ನೆರೆಯ ತಮಿಳುನಾಡು, ಕೇರಳ ಸೇರಿದಂತೆ ಇತರೆ ಪ್ರಮುಖ ಭಾಗಗಳಲ್ಲೂ ಬೆಳ್ಳಿ ಬೆಲೆ 100 ಗ್ರಾಂಗೆ 17,500 ರೂಪಾಯಿ ಆಸುಪಾಸಿನಲ್ಲೇ ಇದೆ.
ಬಂಗಾರದ ಬೆಲೆ ಗಗನಕ್ಕೇರಿದಾಗ ಕಂಗಾಲಾಗಿದ್ದ ಮಧ್ಯಮ ವರ್ಗದ ಜನರು ಹಾಗೂ ಮದುವೆ-ಶುಭಕಾರ್ಯಗಳಿಗೆ ಆಭರಣ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಈ ಬೆಲೆ ಇಳಿಕೆ ತುಸು ನಿರಾಳತೆ ತಂದಿದೆ. ವರ್ಷದ ಹಿಂದಿನ ದರಕ್ಕೆ ಬೆಲೆ ಇಳಿದಿರುವುದರಿಂದ ಹೂಡಿಕೆದಾರರು ಮತ್ತು ಆಭರಣ ಪ್ರಿಯರು ಮಾರುಕಟ್ಟೆಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಇಳಿಯಬಹುದೇ ಅಥವಾ ಮತ್ತೆ ಏರಿಕೆಯ ಹಾದಿ ಹಿಡಿಯಬಹುದೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.



