November 20, 2026
Friday, November 20, 2026
spot_img

ಒಡಿಶಾ, ಆಂಧ್ರ ಕರಾವಳಿಗೆ ಅಬ್ಬರಿಸಿದ ಅಕ್ವಾನ್‌ ಚಂಡಮಾರುತ: ಮೂರು ಲಕ್ಷ ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶದ ಕರಾವಳಿಗೆ ಅಕ್ವಾನ್‌ ಚಂಡಮಾರುತ ಅಬ್ಬರಿಸಿದ್ದು, ಬರೋಬ್ಬರಿ ಮೂರು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಇಂದು ಬೆಳಗ್ಗೆ 7:30 ರಿಂದ 8:30ರ ನಡುವೆ ಚಂಡಮಾರುತವು ಕರಾವಳಿ ದಾಟಿದೆ.

ಹವಾಮಾನ ಇಲಾಖೆಯ ಮಾಪನದಲ್ಲಿ ನಾಲ್ಕನೇ ಅತ್ಯುನ್ನತ ವರ್ಗವಾದ ತೀವ್ರ ಚಂಡಮಾರುತ ಎಂದು ಗುರುತಿಸಲ್ಪಟ್ಟಿದ್ದ ಅಕ್ವಾನ್, ಕರಾವಳಿಗೆ ಅಪ್ಪಳಿಸುವ ಮುನ್ನ ಕೊಂಚ ದುರ್ಬಲಗೊಂಡು ಸಾಮಾನ್ಯ ಚಂಡಮಾರುತವಾಗಿ ಮಾರ್ಪಟ್ಟಿದೆ.
ಇದರಿಂದಾಗಿ ಗೋಪಾಲಪುರ ಸಮೀಪ ಕರಾವಳಿ ದಾಟುವಾಗ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದು, ಗಾಳಿಯ ರಭಸ ಗಂಟೆಗೆ 90 ಕಿ.ಮೀ. ವರೆಗೂ ತಲುಪಿದೆ.

ಚಂಡಮಾರುತದಿಂದ ಹಾನಿಯಾಗುವ ಸಾಧ್ಯತೆ ಇದ್ದು, ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಮೂರು ಸಾವಿರ ಮಂದಿಗೆ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಸಂಭಾವ್ಯ ಪೀಡಿತ ಜಿಲ್ಲೆಗಳಲ್ಲಿ ಒಟ್ಟು 9,341 ಚಂಡಮಾರುತ ಆಶ್ರಯ ತಾಣಗಳನ್ನು ಸಜ್ಜುಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸೇರಿದಂತೆ ಒಟ್ಟು 423 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಪೂರ್ವ ಕರಾವಳಿ ರೈಲ್ವೆ ವಲಯದಲ್ಲಿ 41 ರೈಲುಗಳನ್ನು ರದ್ದುಗೊಳಿಸಲಾಗಿದೆ.

Must Read