November 20, 2026
Friday, November 20, 2026
spot_img

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರನ್ನು ಬೋಧನೇತರ ಕೆಲಸಗಳಿಂದ ಮುಕ್ತಗೊಳಿಸಿ: ಕೇಂದ್ರಕ್ಕೆ ಮಧು ಬಂಗಾರಪ್ಪ ಮನವಿ

ಹೊಸದಿಗಂತ ವರದಿ ರಾಯಚೂರು:

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕೆ ಮತ್ತು ಶೇಕಡಾ ನೂರರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರನ್ನು ಬೋಧನೇತರ ಕೆಲಸಗಳಾದ ಸಿಎಸ್‌ಆರ್ ಮತ್ತು ಎಸ್‌ಎಸ್‌ಆರ್ ಜವಾಬ್ದಾರಿಯನ್ನು ನೀಡದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಕೇಳಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

 ಶುಕ್ರವಾರ ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತ ಕಾರ್ಯಾಲಯ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 2026-27ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಗುಣಾತ್ಮಕ ಫಲಿತಾಂಶ ಸುಧಾರಣೆಗಾಗಿ ಮಿಷನ್ 40+ ಸಂಕಲ್ಪ 2.0 ಕಾರ್ಯಕ್ರಮದ ವಿಭಾಗ ಮಟ್ಟದ ಸಂಪನ್ಮೂಲ ಶಿಕ್ಷಕರ ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

 ರಾಜ್ಯದಲ್ಲಿ ಬರುವ ನಾಲ್ಕು ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಬರುತ್ತವೆ ಈ ಹಿನ್ನಲೆಯಲ್ಲಿ ಮಕ್ಕಳಿಗೆ ಉತ್ತಮ ರೀತಿಯ ಬೋಧನೆ ಬಹಳ ಅವಶ್ಯಕವಾಗಿರುತ್ತದೆ ಈ ಹಿನ್ನಲೆಯಲ್ಲಿ ಶಿಕ್ಷಕರನ್ನು ಮಕ್ಕಳಿಗೆ ನಿಯಮಿತವಾದ ಮತ್ತು ಸಂಜೆ ಸಮಯದಲ್ಲಿನ ಹೆಚ್ಚಿನ ಪಾಠ ಮಾಡುವುದು ಬಹಳ ಅಗತ್ಯ ಎನ್ನುವುದು ಶಿಕ್ಷಣ ಇಲಾಖೆಯ ಅಚಲವಾದ ನಿಲುವಾಗಿರುವುದರಿಂದ ಶಿಕ್ಷಕರನ್ನು ಮುಂದಿನ ಮೂರನಾಲ್ಕು ತಿಂಗಳುಗಳ ಕಾಲ ಕೇವಲ ಪಾಠ ಮಾಡುವ ಕೆಲಸಕ್ಕೆ ಸೀಮಿತವಾಗಿರಬೇಕೆನ್ನುವುದು ರಾಜ್ಯ ಸರ್ಕಾರದ ನಿಲುವಾಗಿದೆ ಎಂದರು.

 ಸರ್ಕಾರಿ ಶಾಲೆಗಳ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸುವುದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಶೇ.40 ಅಥವಾ ಶೇ.40ಕ್ಕಿಂತ ಹೆಚ್ಚಿನ ಫಲಿತಾಂಶಕ್ಕೆ ಸೀಮಿತವಾಗದೆ ಶೇ.60ಕ್ಕಿಂತ ಹೆಚ್ಚಿನ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಎಲ್ಲರೂ ಒಗ್ಗಟಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

 ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸುವ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲು ನಾವು ಜಾರಿಗೆ ತಂದಿರುವ ಮಿಷನ್ 40+’ ಎಂಬ ಅಭಿಯಾನದ ಉದ್ದೇಶ ಕೇವಲ ಫಲಿತಾಂಶವನ್ನು ಸುಧಾರಿಸುವುದು ಮಾತ್ರವಲ್ಲ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಅವರಲ್ಲಿ ಸಕಾರಾತ್ಮಕ ಬದಲಾವಣೆ ತರುವುದೂ ನಮ್ಮ ಗುರಿಯಾಗಿದೆ ಎಂದರು.

 ಕಲಬುರಗಿ ವಿಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ, ಪ್ರಾಂಶುಪಾಲರಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ತಾಲ್ಲೂಕುಗಳ ಎಲ್ಲಾ ಮಾಧ್ಯಮ ಹಾಗೂ ಎಲ್ಲಾ ವಿಷಯಗಳ ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಿಗೆ, ಶಿಕ್ಷಕರಿಗೆ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಈ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:

 ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳೇ ಇಲ್ಲ ಎಂದು ಹೇಳುವುದಿಲ್ಲ. ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿ, ಶಿಕ್ಷಕರಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ನಾನು ಬದ್ಧನಾಗಿದ್ದು, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಸಚಿವರು ಭರವಸೆ ನೀಡಿದರು.

 ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಶಾಲಾ ಶಿಕ್ಷಣ ಇಲಾಖೆಯ ಕಲಬುರ್ಗಿ ವಿಭಾಗದ ಅಪರ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಮಾತನಾಡಿದರು.  ವೇದಿಕೆಯಲ್ಲಿ ರಾಜ್ಯ ಪದವಿ ಪೂರ್ವ ಪರೀಕ್ಷಾ ಮಂಡಳಿಯ ನಿರ್ದೇಶಕ ಭರತ್.ಎಸ್., ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕಿ ಅನಿತಾ ನಜಾರೆ, ಶಾಲಾ ಶಿಕ್ಷಣ ಇಲಾಖೆಯ ಕಲಬುರ್ಗಿ ವಿಭಾಗದ ಆಡಳಿತ ನಿರ್ದೇಶಕ ಮಂಗಳ ನಾಯಕ, ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.  

Must Read

Skip to toolbar