ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಜನಪ್ರಿಯ ನಿರ್ದೇಶಕ ಆದಿತ್ಯ ಧರ್ ಮತ್ತು ನಟಿ ಯಾಮಿ ಗೌತಮ್ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಪಯಣದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಈ ದಂಪತಿ, ಪರಸ್ಪರರ ಯಶಸ್ಸಿನ ಹಿಂದಿರುವ ಶ್ರಮ ಮತ್ತು ಬೆಂಬಲವನ್ನು ಸ್ಮರಿಸಿದರು.
‘ರಾತ್ರೋರಾತ್ರಿ ಸ್ಟಾರ್ ಆಗಲು 20 ವರ್ಷ ಬೇಕಾಯಿತು’
ಚಿತ್ರರಂಗದಲ್ಲಿನ ತಮ್ಮ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ ಆದಿತ್ಯ ಧರ್, “ನಾನು ರಾತ್ರೋರಾತ್ರಿ ಸ್ಟಾರ್ ಆಗಲು ಬರೋಬ್ಬರಿ 20 ವರ್ಷಗಳು ಬೇಕಾಯಿತು ಎಂದು ಮಾತ್ರ ಹೇಳಬಲ್ಲೆ. ಇದೊಂದು ಅತ್ಯಂತ ಕಠಿಣ ಹಾದಿಯಾಗಿತ್ತು” ಎಂದರು. 2006ರಲ್ಲಿ ಸಿನಿಮಾ ಕನಸು ಹೊತ್ತು ಮುಂಬೈಗೆ ಬಂದ ಆದಿತ್ಯ, ಸಹಾಯಕ ನಿರ್ದೇಶಕರಾಗಿ, ಗೀತರಚನೆಕಾರರಾಗಿ ಹಾಗೂ ಸಂಭಾಷಣೆಕಾರರಾಗಿ ಹಲವು ವರ್ಷಗಳ ಕಾಲ ಶ್ರಮಿಸಿದ್ದರು. ಬಳಿಕ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಧುರಂಧರ್’ ಚಿತ್ರಗಳ ಮೂಲಕ ಭಾರೀ ಯಶಸ್ಸು ಕಂಡರು.
ಪತ್ನಿಯೇ ನನ್ನ ಅದೃಷ್ಟದ ‘ಲೇಡಿ ಲಕ್’
ಪತ್ನಿ ಯಾಮಿ ಗೌತಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆದಿತ್ಯ, ಯಾಮಿ ನನ್ನ ಜೀವನಕ್ಕೆ ಕಾಲಿಟ್ಟ ಕ್ಷಣದಿಂದಲೇ ನನ್ನ ಅದೃಷ್ಟ ಬದಲಾಯಿತು. ಇಂದು ನಾನು ಭಾರತದ ಕಥೆಗಳನ್ನು ಜಗತ್ತಿಗೆ ಹೇಳಲು ಸಾಧ್ಯವಾಗುತ್ತಿರುವುದಕ್ಕೆ ಆಕೆಯ ‘ಲೇಡಿ ಲಕ್’ ಕಾರಣ” ಎಂದು ಭಾವುಕರಾಗಿ ನುಡಿದರು. ಅಲ್ಲದೆ, ಯಾಮಿ ಅವರ ಪ್ರತಿಭೆಯ ಶೇ. 50ರಷ್ಟನ್ನೂ ಪ್ರೇಕ್ಷಕರು ಇನ್ನೂ ನೋಡಿಲ್ಲ, ‘ಆರ್ಟಿಕಲ್ 370’ ಮತ್ತು ‘ಹಕ್’ ಚಿತ್ರಗಳಲ್ಲಿ ಅವರ ನಟನೆ ಅದ್ಭುತವಾಗಿತ್ತು ಎಂದು ಶ್ಲಾಘಿಸಿದರು.
ಪತಿಯ ಪ್ರಾಮಾಣಿಕತೆ, ಶ್ರಮಕ್ಕೆ ಯಾಮಿ ಸಲಾಂ
ಇದೇ ವೇದಿಕೆಯಲ್ಲಿ ಪತಿ ಆದಿತ್ಯ ಧರ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಯಾಮಿ ಗೌತಮ್, “ಚಿತ್ರರಂಗದ ಕಹಿ ಅನುಭವಗಳು ಕೆಲವೊಮ್ಮೆ ಮನುಷ್ಯನನ್ನು ನಕಾರಾತ್ಮಕವಾಗಿ ಬದಲಾಯಿಸುತ್ತವೆ. ಆದರೆ, ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಆದಿತ್ಯ ತಮ್ಮೊಳಗಿನ ಒಳ್ಳೆಯತನ ಮತ್ತು ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದಾರೆ. ಅವರು ಎಂದಿಗೂ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ” ಎಂದರು. ಚಿತ್ರೀಕರಣದ ಸಮಯದಲ್ಲಿ ನಿದ್ದೆಯಿಲ್ಲದೆ ಸತತ 70 ಗಂಟೆಗಳ ಕಾಲ ಕೆಲಸ ಮಾಡುವ ಅವರ ಬದ್ಧತೆ ಮತ್ತು ಧೈರ್ಯವನ್ನು ಯಾಮಿ ಕೊಂಡಾಡಿದರು.
ಇದನ್ನೂ ಓದಿ:
ಕೆಲಸ ಮತ್ತು ವೈವಾಹಿಕ ಜೀವನದ ನಡುವೆ ಸ್ಪಷ್ಟ ಗೆರೆ
ಪತ್ನಿಗೆ ನಿರ್ದೇಶನ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆದಿತ್ಯ, “ವೈಯಕ್ತಿಕವಾಗಿ ನಾವು ಗಂಡ-ಹೆಂಡತಿಯಾಗಿದ್ದರೂ, ಕೆಲಸದ ವಿಚಾರದಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳುತ್ತೇವೆ. ಹೊಸ ಸಿನಿಮಾದ ಆಫರ್ ನೀಡುವಾಗಲೂ ಮನೆಯಲ್ಲಿ ಸುಮ್ಮನೆ ಮಾತನಾಡದೆ, ಅಧಿಕೃತ ಮಾರ್ಗದ ಮೂಲಕವೇ ಚರ್ಚಿಸುತ್ತೇವೆ. ಏಕೆಂದರೆ ಕೆಲಸ ನಮಗೆ ಸರಸ್ವತಿ ಸಮಾನ, ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ” ಎಂದು ತಿಳಿಸಿದರು.
2021ರ ಜೂನ್ 4ರಂದು ಹಿಮಾಚಲ ಪ್ರದೇಶದಲ್ಲಿ ಸರಳವಾಗಿ ವಿವಾಹವಾಗಿದ್ದ ಈ ದಂಪತಿಗೆ 2024ರ ಮೇ ತಿಂಗಳಲ್ಲಿ ‘ವೇದಾವಿದ್’ ಎಂಬ ಗಂಡು ಮಗು ಜನಿಸಿತ್ತು.



