November 20, 2026
Friday, November 20, 2026
spot_img

ರಾಜಸ್ಥಾನ ಪಂಚಾಯತ್ ಫಲಿತಾಂಶ: ಬಿಜೆಪಿ ವಿರುದ್ಧ ಕಾಂಗ್ರೆಸ್ ಜಯ, ಆರ್‌ಎಲ್‌ಪಿ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಜೆಪಿ ಆಡಳಿತವಿರುವ ರಾಜಸ್ಥಾನದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಶುಕ್ರವಾರ ಸಂಜೆಯವರೆಗೆ ಪ್ರಕಟವಾದ ರಾಜ್ಯ ಚುನಾವಣಾ ಆಯೋಗದ (SEC) ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ 3,700ಕ್ಕೂ ಹೆಚ್ಚು ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 2,200ಕ್ಕಿಂತ ಕಡಿಮೆ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, 599 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ ಕೇವಲ 301 ಸ್ಥಾನಗಳನ್ನು ಗೆದ್ದಿದೆ. ರಾಜ್ಯದ 41 ಜಿಲ್ಲೆಗಳ ಪೈಕಿ 37 ಜಿಲ್ಲೆಗಳ 7,543 ಪಂಚಾಯತ್ ಸಮಿತಿ ಸ್ಥಾನಗಳಲ್ಲಿ 7,393 ಹಾಗೂ 1,275 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ 981 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಕೋಟಾ, ಬರನ್, ಕರೌಲಿ ಮತ್ತು ಶ್ರೀ ಗಂಗಾನಗರ ಜಿಲ್ಲೆಗಳ ಹಾಲಿ ಸಂಸ್ಥೆಗಳ ಅವಧಿ ಮುಂದಿನ ತಿಂಗಳು ಮುಗಿಯಲಿರುವುದರಿಂದ, ಅಲ್ಲಿನ ಮತ ಎಣಿಕೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಲಾಗಿದೆ.

ಪಕ್ಷವಾರು ಬಲಾಬಲ ಹೇಗಿದೆ?

37 ಜಿಲ್ಲೆಗಳ ಪೈಕಿ 33 ಜಿಲ್ಲೆಗಳ ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೇವಲ ಅಜ್ಮೀರ್, ಬಲೋತ್ರಾ, ಸಲುಂಬರ್ ಮತ್ತು ಉದಯಪುರ ಈ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಜಿಲ್ಲಾ ಪರಿಷತ್‌ನಲ್ಲಿ ಕಾಂಗ್ರೆಸ್ 24 ಜಿಲ್ಲೆಗಳಲ್ಲಿ ಹಾಗೂ ಬಿಜೆಪಿ 6 ಜಿಲ್ಲೆಗಳಲ್ಲಿ ಮುನ್ನಡೆ ಪಡೆದಿವೆ. ಇನ್ನುಳಿದಂತೆ ಹನುಮಾನ್ ಬೇನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) 496 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದರೆ, ಭಾರತ್ ಆದಿವಾಸಿ ಪಾರ್ಟಿ (BAP) 276, ಬಿಎಸ್‌ಪಿ 60, ಸಿಪಿಐ(ಎಂ) 50, ಆಮ್ ಆದ್ಮಿ ಪಕ್ಷ 2 ಹಾಗೂ ಪಕ್ಷೇತರರು 627 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ನಗರ ಪ್ರದೇಶಕ್ಕಿಂತ ಭಿನ್ನವಾದ ಗ್ರಾಮೀಣ ತೀರ್ಪು

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 10 ಮಹಾನಗರ ಪಾಲಿಕೆಗಳ ಪೈಕಿ 9 ರಲ್ಲಿ ಮೇಯರ್ ಸ್ಥಾನ ಹಾಗೂ 204 ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು, ಕಾಂಗ್ರೆಸ್ 96 ಸ್ಥಾನ ಗೆದ್ದಿತ್ತು. ಆದರೆ, ಭಜನ್ ಲಾಲ್ ಶರ್ಮಾ ಸರ್ಕಾರ ಮೂರು ವರ್ಷ ಪೂರೈಸಲು ಕೆಲವೇ ವಾರಗಳಿರುವಾಗ ಗ್ರಾಮೀಣ ಮತದಾರರು ಸಂಪೂರ್ಣ ವಿರುದ್ಧವಾದ ತೀರ್ಪು ನೀಡಿದ್ದಾರೆ. 2020ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಚುನಾವಣೆಯಲ್ಲಿ ಬಿಜೆಪಿ 1,989 ಹಾಗೂ ಕಾಂಗ್ರೆಸ್ 1,852 ಸಮಿತಿ ಸ್ಥಾನಗಳನ್ನು ಗೆದ್ದಿದ್ದವು.

ಬಿಜೆಪಿ ಸರ್ಕಾರದ ಅವಧಿ ಮುಗಿಯುವ ಸಂದೇಶ

ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಪಂಚಾಯತ್ ರಾಜ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಗೆಲುವು ನೀಡುವ ಮೂಲಕ ಗ್ರಾಮೀಣ ಮತದಾರರು ಬಿಜೆಪಿ ಸರ್ಕಾರದ ಅವಧಿ ಮುಗಿದಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರು ಬಿಜೆಪಿಯ ಸುಳ್ಳು ಭರವಸೆಗಳಿಂದ ಬೇಸತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು. ಇತ್ತ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಅವರ ತವರು ಕ್ಷೇತ್ರ ಲಕ್ಷ್ಮಣಗಢದ ಎಲ್ಲಾ ಮೂರು ಪಂಚಾಯತ್ ಸಮಿತಿಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದಿದೆ. ಸಲಾಸರ್ ಬಾಲಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ದೋಟಾಸ್ರಾ, ಈ ಗೆಲುವನ್ನು ತಳಮಟ್ಟದ ಕಾರ್ಯಕರ್ತರಿಗೆ ಅರ್ಪಿಸಿದರು.

ಇದನ್ನೂ ಓದಿ:

ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ

ಜನಾದೇಶವನ್ನು ಗೌರವಿಸುವುದಾಗಿ ತಿಳಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ರಾಥೋಡ್, ಫಲಿತಾಂಶದ ಬಗ್ಗೆ ಆಂತರಿಕ ವಿಮರ್ಶೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರ ಚುನಾವಣಾ ಅಕ್ರಮದ ಆರೋಪಗಳಿಗೆ ತಿರುಗೇಟು ನೀಡಿದ ಅವರು, “ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಮತ್ತು ಚುನಾವಣಾ ಆಯೋಗವು ಯಾವುದೇ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ಈಗಲಾದರೂ ಒಪ್ಪಿಕೊಳ್ಳಬೇಕು” ಎಂದರು. ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ, ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಬಿಜೆಪಿ ವಕ್ತಾರ ರಾಮ್ ಲಾಲ್ ಶರ್ಮಾ ತಿಳಿಸಿದ್ದಾರೆ.

Must Read

Skip to toolbar